ತುಮಕೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್.ಟಿ ವಿಭಾಗದ ಸಭೆ

Update: 2018-01-13 16:54 GMT

ತುಮಕೂರು. ಜ.13: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಟಿ.ಬಿ. ಮಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಮುಖವಾಗಿ ಜನವರಿ ತಿಂಗಳ ಕೊನೆಯ ವಾರದಲ್ಲಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಪರಿಶಿಷ್ಟ ಪಂಗಡ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳುವುದು ಹಾಗೂ ರಾಜ್ಯದ ವರಿಷ್ಠರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ.ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳೆ, ಸಹಕಾರ ಸಚಿವರಾದ ರಮೇಶ್ ಜಾರಕಿಹೊಳೆ, ಅಪೇಕ್ಸ್ ಬ್ಯಾಂಕ್ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಮತ್ತು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಅವರುಗಳು ಒಗ್ಗೂಡಿ ನಡೆಸುತ್ತಿರುವ ಈ ಸಮಾವೇಶಕ್ಕೆ ತುಮಕೂರು ಜಿಲ್ಲೆಯಿಂದ ಅತಿ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಕುರಿತು ಚರ್ಚೆ ನಡೆಸಲಾಯಿತು.

ಮೊದಲಿಗೆ ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್.ಟಿ.ಘಟಕದ ಅಧ್ಯಕ್ಷ ಟಿ.ಬಿ. ಮಲ್ಲೇಶ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಿಂದ ಕೊರಟಗೆರೆ ಮತ್ತು ಮಧುಗಿರಿ ವಿಧಾನಸಭಾಗಳು ಸೇರಿದಂತೆ ಜಿಲ್ಲೆಯ ಎಲ್ಲಾ 11 ಕ್ಷೇತ್ರಗಳಲ್ಲಿಯೂ ಸುಮಾರು 2.50 ಲಕ್ಷ ಜನ ಪರಿಶಿಷ್ಟ ಪಂಗಡದ ಮತದಾರರು ಒಗ್ಗೂಡಿ, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಶಕ್ತಿ ಮೀರಿ ದುಡಿಯಬೇಕು. ಪ್ರತಿ ಮನೆಯಲ್ಲಿಯೂ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಮತದಾರರ ಮನಸ್ಸಿನಲ್ಲಿ ಉಳಿಯುವಂತೆ ಕಾರ್ಯಕರ್ತರು ಪ್ರಚಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಕೊರಟಗೆರೆ ತಾಲೂಕು ಪರಿಶಿಷ್ಟ ಪಂಗಡದ ಅಧ್ಯಕ್ಷ ಕೆ.ಆರ್. ಓಬಳರಾಜು ಮಾತನಾಡಿ, ಕೊರಟಗೆರೆಯಲ್ಲಿ ಈಗಾಗಲೇ ಪರಿಶಿಷ್ಟ ಪಂಗಡದ ಕಾರ್ಯಕರ್ತರು ಒಗ್ಗೂಡಿ ಪಕ್ಷದ ಅಭ್ಯರ್ಥಿಯಾಗಿರುವ ಡಾ.ಜಿ.ಪರಮೇಶ್ವರ್ ಅವರು ಜಯಗಳಿಸುವಂತೆ ಮಾಡಲು ಪೂರ್ವಬಾವಿಯಾಗಿ ಕ್ಷೇತ್ರದ ಎಲ್ಲಾ ಪಂಚಾಯಿತಿಯ ಸಾವಿರಾರು ಕಾರ್ಯಕರ್ತರು ಹಗಲಿರುಳು ದುಡಿಯುತ್ತಿದ್ದಾರೆ. ಕಾಂಗ್ರೆಸ ಪಕ್ಷದ ಕಾರ್ಯಕ್ರಮಗಳನ್ನು ಪ್ರತಿ ಮನೆ ತಲುಪಿಸಲು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಮುಂದಿನ ಫೆಬ್ರವರಿ ತಿಂಗಳಲ್ಲಿ ಪರಿಶಿಷ್ಟ ಪಂಗಡದ ಸಮಾವೇಶವನ್ನು ಕೊರಟಗೆರೆಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಿದ್ದು,ಇದರ ಅಂಗವಾಗಿ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರವಾಸ ಹಮ್ಮಿಕೊಂಡು ಕಾಂಗ್ರೆಸ್ ಗೆಲುವಿಗೆ ಮುಂದಾಗುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷ ಆರ್.ರಾಜೇಂದ್ರ ಮಾತನಾಡಿ,ಜಿಲ್ಲೆಯ 11 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಜಯಗಳಿಸುವ ಲಕ್ಷಣಗಳು ಕಂಡು ಬರುತ್ತಿವೆ.ಕಾಂಗ್ರೆಸ್‍ನ ಯುವ ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಪಕ್ಷದ ಗೆಲುವಿಗೆ ದುಡಿಯುತ್ತಿದ್ದಾರೆ.ಇದಕ್ಕೆ ಪೂರಕವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ತಮ್ಮಲ್ಲಿರುವ ಭಿನ್ನಾಪ್ರಾಯಗಳನ್ನು ಬದಿಗೊತ್ತಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ದುಡಿಯುವಂತೆ ಸಲಹೆ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಮಹಿಳಾ ಘಟಕಗಳು ಸಕ್ರಿಯವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು,ಮಹಿಳಾ ಸಂಘಟನೆಗಳಿಗೆ ಎಲ್ಲಾ ರೀತಿ ಸಾಲಸೌಲಭ್ಯವನ್ನು ಡಿ.ಸಿ.ಸಿ.ಬ್ಯಾಂಕ್ ವತಿಯಿಂದ ಒದಗಿಸಲಾಗುವುದು.ತಮ್ಮ ವ್ಯಾಪ್ತಿಯಲ್ಲಿ ಬರುವ ಸ್ತ್ರಿಶಕ್ತಿ ಸಂಘಟನೆಗಳು,ಮಹಿಳಾ ಸಂಘಟನೆಗಳು ಸರಕಾರದ ಸಹಾಯ ಪಡೆದಿರುವ ಮಹಿಳಾ ಗುಂಪುಗಳನ್ನು ಒಂದುಗೂಡಿ ಪಕ್ಷದ ಗೆಲುವಿಗೆ ಸಹಕರಿಸುವಂತೆ ಮಹಿಳಾ ಕಾರ್ಯಕರ್ತರಿಗೆ ಮನವಿ ಮಾಡಿದರು.

ಸಭೆಯಲ್ಲಿ ಕೆ.ಪಿ.ಸಿ.ಸಿ. ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಕೆ.ಬಸಪ್ಪ, ರಾಕೇಶ್‍ನಾಯಕ್,ಕವಿತಾ ನರಸಪ್ಪ, ಕಿರಣ್, ವಕೀಲರಾದ ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಶರತ್‍ಬಾಬು,ಮರಳೂರು ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News