ಕೇಂದ್ರ ಗೃಹ ಇಲಾಖೆಗೆ ದೂರು ನೀಡಲು ನಿರ್ಧಾರ: ಸಚಿವ ರಾಮಲಿಂಗಾರೆಡ್ಡಿ
ಶಿವಮೊಗ್ಗ, ಜ. 14: ಪ್ರಮುಖ ಸಚಿವರ ಪೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತಂತೆ ಕೇಂದ್ರ ಗೃಹ ಇಲಾಖೆಗೆ ದೂರು ನೀಡಲಾಗುವುದು ಎಂದು ಗೃಹ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.
ಭಾನುವಾರ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‍ಪೇಟೆಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಸಚಿವರ ಪೋನ್ ಕದ್ದಾಲಿಕೆ ಮಾಡುತ್ತಿರುವ ಕುರಿತಂತೆ ಮೂರು ತಿಂಗಳ ಹಿಂದೆಯೇ ಆಕ್ಷೇಪಿಸಿದ್ದೆ. ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರಂತರವಾಗಿ ಸಚಿವರ ಪೋನ್ ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾಪ ರಾಜ್ಯ ಸರ್ಕಾರದ ಮುಂದಿಲ್ಲ. ಆದರೆ ಶಾಂತಿ- ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಬಿಜೆಪಿ ಪಕ್ಷವು ರಾಜಕೀಯ ಲಾಭಕ್ಕಾಗಿ ಕೆಲ ಸಂಘಟನೆಗಳ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ಆ ಪಕ್ಷದ ಮುಖಂಡರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.