ಜೆಡಿಎಸ್, ಕಾಂಗ್ರೆಸ್ ನಾಯಕರಿಂದ ಮಂಡ್ಯ ಅಭಿವೃದ್ಧಿಯಾಗಿಲ್ಲ: ಶಾಸಕ ಸಿ.ಪಿ.ಯೋಗೇಶ್ವರ್

Update: 2018-01-14 14:11 GMT

ಮದ್ದೂರು, ಜ.14: ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರಿಂದ ಮಂಡ್ಯ ಜಿಲ್ಲೆಗೆ ಸುಮಾರು 20 ವರ್ಷಗಳಿಂದ ಯಾವುದೇ ಅಭಿವೃದ್ಧಿ ಸಾಧ್ಯವಾಗಿಲ್ಲ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಆರೋಪಿಸಿದ್ದಾರೆ.

ತಾಲೂಕಿನ ಬೆಸಗರಹಳ್ಳಿ ಅಡ್ಡ ರಸ್ತೆಯಲ್ಲಿ ರವಿವಾರ ಬೆಸಗರಹಳ್ಳಿ ಜಿಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಬರಪೀಡಿತ ಕೋಲಾರದಲ್ಲಿ ರೈತರ ಆತ್ಮಹತ್ಯೆಯಾಗುತ್ತಿಲ್ಲ. ಆದರೆ, ನೀರಾವರಿ ಸೌಲಭ್ಯವಿರುವ ಮಂಡ್ಯ ಜಿಲ್ಲೆಯಲ್ಲಿ ಅತೀ ಹೆಚ್ಚು ಆತ್ಮಹತ್ಯೆಗಳಾಗುತ್ತಿವೆ. ಇದಕ್ಕೆ ಮುಖ್ಯ ಕಾರಣ ರೈತರ ಪರವಾಗಿ ಯೋಜನೆಗಳನ್ನು ಜಾರಿಗೊಳಿಸುವ ಇಚ್ಚಾಶಕ್ತಿಯುಳ್ಳ ನಾಯಕರ ಕೊರತೆ ಎಂದು ಅವರು ಟೀಕಿಸಿದರು.

ಕಾಂಗ್ರೆಸ್ ಸರಕಾರ ರೈತರಿಗೆ ಅನುಕೂಲವಾಗುವ ನಿರ್ಧಿಷ್ಟ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಬೆಂಬಲ ಬೆಲೆ ನಿಗದಿ ಮಾಡುತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದರೆ ರೈತಪರ ಸರಕಾರ ಜಾರಿಗೊಳ್ಳಲಿದೆ ಎಂದು ಅವರು ಹೇಳಿದರು. 

ಕೆ.ಆರ್.ಎಸ್ ಜಲಾಶಯದಿಂದ ವ್ಯರ್ಥವಾಗುವ ನೀರನ್ನು ಸದುಪಯೋಗಪಡಿಸಿಕೊಳ್ಳುವ ದಿಸೆಯಲ್ಲಿ 5 ಸಾವಿರ ಕೋಟಿ ರೂಪಾಯಿಯ ಯೋಜನೆಯೊಂದನ್ನು ಯೋಜಿಸಲಾಗಿದೆ. ಕೆಆರ್‍ಎಸ್ ಜಲಾಶಯದಿಂದ ಮಾರ್ಕೋನಹಳ್ಳಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಬಿಜೆಪಿ ಅಧಿಕಾರಕ್ಕೆ ಬಂದರೆ ಸಾಕಾರಗೊಳ್ಳಲಿದೆ ಎಂದು ಅವರು ತಿಳಿಸಿದರು.

ಚನ್ನಪಟ್ಟಣದಲ್ಲಿ ನಾನೇ ಗೆಲ್ಲುತ್ತೇನೆ:
ಚನ್ನಪಟ್ಟಣದಲ್ಲಿ 20 ವರ್ಷದಿಂದ ಶಾಸಕನಾಗಿದ್ದೇನೆ. ಮುಂದೆಯೂ ನಾನೇ ಗೆದ್ದು ಶಾಸಕನಾಗಿರುತ್ತೆನೆ. ಕ್ಷೇತ್ರದ ಜನರ ನಾಡಿ ಮಿಡಿತ ಗೊತ್ತಿದೆ. ಅನಿತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಬಂದು ಹೋಗುವ ಅತಿಥಿ. ಅವರಿಗೆ ಜನರು ಮಣೆ ಹಾಕುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ 4 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿಕೊಂಡ ಅವರು, ಮದ್ದೂರಿನ ಬಿಜೆಪಿ ಟಿಕೆಟ್ ಬಗೆಗೆ ಹೈಕಮಾಂಡ್ ತಿರ್ಮಾನ ಕೈಗೊಳ್ಳಲಿದ್ದಾರೆ  ಎಂದರು.

ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಣ್ಣೆದೊಡ್ಡಿ ರಘು ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಪಡೆಯಲಿದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. 

ತಾಲೂಕು ಅಧ್ಯಕ್ಷ ಲಕ್ಷ್ಮಣ್‍ಕುಮಾರ್, ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಶಿವಣ್ಣ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೆಂಪುಬೋರಯ್ಯ, ಮುಖಂಡರಾದ ಕಿಶನ್‍ಗೌಡ, ವಿಶಾಲ್‍ಗೌಡ, ಯೋಗೇಶ್, ಶಿವು, ಚಾಮನಹಳ್ಳಿ ಮಹೇಂದ್ರ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News