ಇಂದಿರಾ ಕ್ಯಾಂಟಿನ್ ಬಗ್ಗೆ ಮಾತನಾಡಿದರೆ ಬಡವರ ವಿರೋಧಿ ಎನ್ನುತ್ತಾರೆ : ವಿಪಕ್ಷ ನಾಯಕ ಜಗದೀಶ್ ಶೆಟ್ಟರ್
ಮೈಸೂರು,ಜ.14: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇಂದಿರಾ ಕ್ಯಾಂಟಿನ್ ಬಗ್ಗೆ ಮಾತನಾಡಿದರೇ ಬಡವರ ವಿರೋಧಿ ಅಂತಾರೆ. ಹೀಗಾಗಿ ನಾವು ಮೌನ ವಹಿಸಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದರು.
ಮೈಸೂರಿನಲ್ಲಿ ರವಿವಾರ ಸುತ್ತೂರು ಜಾತ್ರಾಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ವೋಟಿಗಾಗಿ ಹಲವು ಯೋಜನಗಳನ್ನು ಜಾರಿಗೆ ತರುತ್ತಿದ್ದಾರೆ. ಮುಜರಾಯಿ ಇಲಾಖೆಯ ಮೂಲಕ ವಸ್ತ್ರ ಭಾಗ್ಯ ಎಂದು ಬಟ್ಟೆ ನೀಡುವ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಕಾಂಗ್ರೆಸ್ ನವರು ಅನಧಿಕೃತವಾಗಿ ಇಂತಹ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಕಿಡಿಕಾರಿದರು.
ಆರೆಸ್ಸೆಸ್, ಬಿಜೆಪಿ, ಬಜರಂಗದಳದವರು ಉಗ್ರಗಾಮಿಗಳು ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಕೈಯಲ್ಲಿಯೇ ಅಧಿಕಾರವಿದೆ. ಧೈರ್ಯವಿದ್ದರೆ ನಮ್ಮೆನ್ನೆಲ್ಲ ಬಂಧಿಸಲಿ ಎಂದು ಜಗದೀಶ್ ಶೆಟ್ಟರ್ ಸವಾಲು ಹಾಕಿದರು. ಎಲ್ಲ ಅಧಿಕಾರ ಸಿಎಂ ಕೈಯಲ್ಲಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಸಿದ್ದರಾಮಯ್ಯ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ರಾಜ್ಯಕ್ಕೆ ಅಮಿತ್ ಶಾ ಹಾಗೂ ಮೋದಿ ಬರಲಿದ್ದಾರೆ. ಅವರು ಬಂದು ಹೋದ ನಂತರ ಮತ್ತೇನು ಮಾತನಾಡುತ್ತಾರೋ ಎಂಬ ಭಯ ಅವರಿಗೇ ಈಗಾಗಲೇ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ನಮ್ಮ ಪಕ್ಷದ ಮುಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಂದು ಘೋಷಣೆ ಮಾಡಲಾಗಿದೆ. ಆದರೆ ಕಾಂಗ್ರೆಸ್‍ನಲ್ಲಿ ಇನ್ನು ಸಿಎಂ ಅಭ್ಯರ್ಥಿ ಘೋಷಣೆ ಆಗಿಲ್ಲ. ಮುಂದಿನ ಬಾರಿಯು ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಘೋಷಣೆಯಾದರೆ, ಕಾಂಗ್ರೆಸ್‍ನಲ್ಲಿ ಬಂಡಾಯದ ಬಿಸಿ ಹೈಕಮಾಂಡ್ ಮುಟ್ಟಲಿದೆ. ಅವರಿಗೆ ದಲಿತರ, ಎಲ್ಲ ವರ್ಗದವರ ಮತಬೇಕು. ಆದ್ದರಿಂದ ಅಭ್ಯರ್ಥಿಯನ್ನು ಘೋಷಣೆ ಮಾಡಲು ಹೆದರಿಕೆ ಶುರುವಾಗಿದೆ ಎಂದು ಹೇಳಿದರು.