ಗೋವಾ ಸಚಿವರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
ಚಿಕ್ಕಮಗಳೂರು, ಜ.16: ಗೋವಾದ ನೀರಾವರಿ ಸಚಿವ ವಿನೋದ್ ಪಾಲೇಕರ್ ಕನ್ನಡಿಗರ ಬಗ್ಗೆ ಅವಹೇಳನವಾಗಿ ಮಾತನಾಡಿರುವುದನ್ನು ಖಂಡಿಸಿ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಮಂಗಳವಾರ ಕಾರ್ಯಕರ್ತರು ನಗರದ ತಾಲ್ಲೂಕು ಕಛೇರಿಯಿಂದ ಮೆರವಣಿಗೆಯಲ್ಲಿ ತೆರಳಿ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಮಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ ಕುಮಾರ್ ಮಾತನಾಡಿ, ಸಚಿವರಾಗಿ ಜವಾಬ್ದಾರಿ ಸ್ಥಾನದಲ್ಲಿದ್ದು, ಮಾತನಾಡುವಾಗ ಗಂಭೀರತೆಯನ್ನು ಎತ್ತಿ ಹಿಡಿಯದವರು ಪ್ರಜಾಪ್ರಭುತ್ವದಲ್ಲಿ ನಾಯಕರಾಗಿರಲು ಯೋಗ್ಯರಲ್ಲ. ಮಹಾದಾಯಿ ನೀರಿನ ವಿಚಾರದಲ್ಲಿ ಕನ್ನಡಿಗರ ಬಗ್ಗೆ ಅವಾಚ್ಯವಾಗಿ ಮಾತನಾಡಿದ್ದನ್ನು ಕಾಂಗ್ರೆಸ್ ಖಂಡಿಸುತ್ತದೆ ಹಾಗೆಯೇ ಬಿಜೆಪಿಯ ಆನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಯವರು ಕೂಡ ನಾಲಿಗೆ ಹರಿಬಿಡುತ್ತಿದ್ದು, ಅದೆಲ್ಲಾ ಅವರ ಯೋಗ್ಯತೆ ತೋರಿಸುತ್ತದೆ ಎಂದರು.
ಸಿಡಿಎ ಅಧ್ಯಕ್ಷ ಮಹಮದ್ ಹನೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಮಾತನಾಡಿ, ಬಿಜೆಪಿ ಮುಖಂಡರ ನಾಲಿಗೆ ಹರಿಬಿಡುವ ರೀತಿಯನ್ನು ಖಂಡಿಸಿದರು. ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡನೀಯ, ಸಾರ್ವಜನಿಕರು ನಮ್ಮ ಪ್ರತಿಭಟನೆಯೊಂದಿಗೆ ಕೈಜೋಡಿಸಬೇಕೆಂದರು.
ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ವಿ .ಶಿವಕುಮಾರ್, ರಾಜ್ಯ ಕಾರ್ಯದರ್ಶಿ ಪುಷ್ಪಲತಾ, ಸೇವಾದಳ ಜಿಲ್ಲಾ ಅಧ್ಯಕ್ಷ ಸಿಲ್ವರ್ ಸ್ಟರ್, ಲೇಬರ್ ಸೆಲ್ ಅಧ್ಯಕ್ಷ ನಯಾಜ್, ಕಿಸಾನ್ ಸಂಘಟನೆಯ ರಾಜ್ಯ ಸಂಚಾಲಕ ಸಿ.ಎನ್. ಅಕ್ಮಲ್, ನಗರ ಸಭೆ ಸದಸ್ಯರುಗಳಾದ ರೂಬೆನ್ ಮೊಸಸ್ ಹೆಚ್.ಎಸ್ ಪುಟ್ಟಸ್ವಾಮಿ, ಅಲ್ಪಸಂಖ್ಯಾತರ ಅದ್ಯಕ್ಷ ನಿಸಾರ್ ಅಹಮದ್ ಬ್ಲಾಕ್ ಕಾಂಗ್ರೆಸ್ ಮುಖಂಡರುಗಳಾದ ಹಿರೇಕೊಳಲೆ ಪ್ರಕಾಶ್, ಸಂದೇಶ್, ಹಿರೇಮಗಳೂರು ರಾಮಚಂದ್ರ, ಪ್ರಸಾದ್ ಹಮೀನ್, ಕೃಷ್ಣ ಮೂರ್ತಿ(ರಾಜು) ತೆರೆಸಾ, ಪಾತಿಮಾ, ರುಕ್ಸಾನ ಮತ್ತಿತರರಿದ್ದರು.