×
Ad

ದಾವಣಗೆರೆ: ಬಲವಂತದ ಸಾಲ ವಸೂಲಿ ಮಾಡುವ ಬ್ಯಾಂಕ್‍ಗಳ ವಿರುದ್ಧ ಪ್ರತಿಭಟನೆ

Update: 2018-01-16 22:48 IST

ದಾವಣಗೆರೆ,ಜ.16: ರೈತರಿಂದ ಬಲವಂತದ ಸಾಲ ವಸೂಲಿ ಮಾಡುತ್ತಿರುವ ಬ್ಯಾಂಕ್‍ಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ರೈತರು ಬ್ಯಾಂಕ್‍ಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ನಂತರ ಚೇತನ ಹೋಟೆಲ್ ರಸ್ತೆಯಲ್ಲಿರುವ ಎಸ್‍ಬಿಐ ಬ್ಯಾಂಕ್ ಶಾಖೆಗೆ ಮುತ್ತಿಗೆ ಹಾಕಿ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭ ರೈತ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ದಾವಣಗೆರೆ ತಾಲೂಕಿನ ಎಸ್‍ಬಿಐ ಬ್ಯಾಂಕಿನವರು ಹಳ್ಳಿಯಲ್ಲಿ ಬಲವಂತದ ಸಾಲ ವಸೂಲಾತಿಗೆ ರೈತರ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಇದರಿಂದ ರೈತರಿಗೆ ಮಾನಸಿಕ ಕಿರುಕುಳವಾಗುತ್ತಿದ್ದು, ಬ್ಯಾಂಕ್‍ನವರು ಸಾರ್ವಜನಿಕವಾಗಿ ಅವಮಾನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ 100 ಕೋಟಿಗೂ ಹೆಚ್ಚಿನ ಮೊತ್ತದ ಸಾಲ ಬಾಕಿ ಇರುವ ಖಾತೆಗಳಲ್ಲಿ ಎಸ್‍ಬಿಐ ಮೊದಲ ಸ್ಥಾನದಲ್ಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಎರಡನೇ ಮತ್ತು ಕೆನರಾ ಬ್ಯಾಂಕ್ ಮೂರನೇ ಸ್ಥಾನದಲ್ಲಿವೆ. ಸರ್ಕಾರಿ ಸ್ವಾಮ್ಯದ 31 ಬ್ಯಾಂಕ್‍ಗಳಲ್ಲಿ 100 ಕೋಟಿಗೂ ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ 1463 ಖಾತೆಗಳಿವೆ ಹಾಗೂ ಈ ಬ್ಯಾಂಕ್‍ಗಳಲ್ಲಿ ಎನ್‍ಪಿಎಯಲ್ಲಿ 7.34 ಲಕ್ಷ ಕೋಟಿ ತಲುಪಿದೆ ಎಂದರು.

5000 ಕೋಟಿಗೂ ಅಧಿಕ ಸಾಲ ಬಾಕಿ ಉಳಿಸಿಕೊಂಡಿರುವ ಹಾಗೂ ಶೇ. 60ಕ್ಕೂ ಹೆಚ್ಚು ಎನ್‍ಪಿಎ ಇರುವ 12 ಬ್ಯಾಂಕ್‍ಗಳ ಬಗ್ಗೆ ಮಾಹಿತಿ ನೀಡುವಂತೆ ಆರ್‍ಬಿಐ ಬ್ಯಾಂಕ್‍ಗಳಿಗೆ ಕೇಳಿದೆ. ಇಷ್ಟು ದೊಡ್ಡ ಮೊತ್ತದ ಸಾಲ ಬಾಕಿ ಇರುವವರು ಬ್ಯಾಂಕ್‍ಗಳ ಸಾಲ ವಸೂಲಿ ಮಾಡದೆ ರೈತರ ಸಣ್ಣ ಪುಟ್ಟ ಸಾಲಗಳಿಗೆ ಎಸ್‍ಬಿಐ ಬ್ಯಾಂಕ್‍ನವರು ರೈತರ ಮನೆ ಬಾಗಿಲಿಗೆ ಬಂದು ಸಾಲದ ಬಾಕಿ ಕಟ್ಟುವಂತೆ ಬಲವಂತ ಮಾಡುತ್ತಿರುವುದು ಖಂಡನೀಯ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಹಲವಾರು ರೈತರು ಸಾಲದ ಬಾಧೆಯಿಂದ ಬ್ಯಾಂಕ್‍ನ ಕಿರುಕುಳದಿಂದ ಸಾಯುತ್ತಿದ್ದಾರೆ. ಮೊದಲು ಕೈಗಾರಿಕೆ ಉದ್ದಿಮೆಗಳ ಕೋಟಿ ಸಾಲ ವಸೂಲಿ ಮಾಡಿ ನಂತರ ರೈತರ ಸಾಲ ಕೇಳಿ ಬಲವಂತದ ಸಾಲ ವಸೂಲಾತಿಗೆ ಹಳ್ಳಿಗೆ ಬಂದರೆ ಸುಮ್ಮನೆ ಇರಲಾಗದು ಎಂದು ಅವರು ಬ್ಯಾಂಕ್‍ಗಳಿಗೆ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಅರಸನಾಳು ಸಿದ್ದಪ್ಪ, ಗುಮ್ಮನೂರು ಬಸವರಾಜ್, ಆಲೂರು ಪರಶುರಾಮ್, ಹೂವಿನಮಡು ನಾಗರಾಜ್, ಜಂಬಣ್ಣ, ಕಲ್ಕೆರೆ ಅಣ್ಣಪ್ಪ, ಯರವನಾಗತಿಹಳ್ಳಿ ರುದ್ರಪ್ಪ, ಕೃಷ್ಣಮೂರ್ತಿ, ಗುಡಾಳ್ ರಾಜಪ್ಪ, ನಾಗೇಂದ್ರಪ್ಪ, ಅರಸನಾಳು ಯಲ್ಲಪ್ಪ, ಕರಿಯಪ್ಪ, ಮ್ಯಾಸರಹಳ್ಳಿ ಸಂಜೀವಪ್ಪ, ಗುಡಾಳ್ ಕೆಂಗಪ್ಪರ ರಾಜಪ್ಪ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News