ಮಿತಿ ಮೀರಿದ ಕಾಡಾನೆ ಹಾವಳಿ: ಹೋರಾಟಕ್ಕೆ ವೇದಿಕೆ ಸಜ್ಜು

Update: 2018-01-16 17:42 GMT

ಸಿದ್ದಾಪುರ (ಕೊಡಗು), ಜ.16: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಡಾನೆ ಹಾವಳಿಯ ನಿಯಂತ್ರಣಕ್ಕೆ ಹೋರಾಟದ ವೇದಿಕೆ ಸಜ್ಜಾಗಿದೆ.

ಬೆಳೆಗಾರರು, ರೈತರು, ಕಾರ್ಮಿಕ ಮುಖಂಡರು ಸೇರಿದಂತೆ ಕಾರ್ಮಿಕರ ಸಭೆಯನ್ನು ಇಲ್ಲಿನ ಮಡಿಕೇರಿ ರಸ್ತೆಯ ಕೊಡವ ಕಲ್ಚರಲ್ ಕ್ಲಬ್‍ನಲ್ಲಿ ಏರ್ಪಡಿಸಲಾಗಿದ್ದು, ಕಾಡಾನೆ ಹಾವಳಿಯಿಂದ ಕಂಗೆಟ್ಟ ಜನತೆ ಅರಣ್ಯ ಇಲಾಖೆ ಹಾಗೂ ಸರಕಾರದ ವಿರುದ್ಧ ಸಿಡಿದೆದ್ದರು. ಸಭೆಯಲ್ಲಿ ಕಾಡಾನೆ ಹಾವಳಿಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಚೇರಂಡ ನಂದ ಸುಬ್ಬಯ್ಯ, ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದ್ದು, ಬೆಳೆಗಾರರು, ಕಾರ್ಮಿಕರು, ರೈತರು ಕಂಗಾಲಾಗಿದ್ದಾರೆ. ಬೆಳೆಯೊಂದಿಗೆ ಜೀವಹಾನಿಯೂ ಕೂಡ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಮೇಲೆ ಒತ್ತಡ ತರಬೇಕಿದೆ ಎಂದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯವನ್ನು ಸಂಗ್ರಹಿಸಿ ಜ.18 ರಂದು ಮಡಿಕೇರಿಯ ಅರಣ್ಯ ಭವನದಲ್ಲಿ ನಡೆಯುವ ಸಭೆಯಲ್ಲಿ ನಿರ್ಣಯವನ್ನು ಮಂಡಿಸಲಾಗುವುದು ಎಂದರು.

ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷರಾದ ಬೋಸ್ ದೇವಯ್ಯ ಮಾತನಾಡಿ, ಕಳೆದ 20 ವರ್ಷಗಳಿಂದಲೂ ಜಿಲ್ಲಾದ್ಯಂತ ಕಾಡಾನೆ ಹಾವಳಿಯಿಂದ ಜನತೆ ನೋವು ಅನುಭವಿಸುತ್ತಿದ್ದು, ಕಾಡಾನೆಗಳಿಗೆ ಅರಣ್ಯದಲ್ಲಿ ಆಹಾರ ನೀರು ಸಿಗದೆ ನಾಡಿಗೆ ಲಗ್ಗೆ ಇಡುತ್ತಿದೆ. ಅರಣ್ಯ ಇಲಾಖೆಯವರು ತೇಗದ ಮರಗಳನ್ನು ನೆಟ್ಟು ಬೆಳೆಸಿ ಅದನ್ನೇ ಮಾರಾಟ ಮಾಡುತ್ತಿದ್ದು, ಕಾಡಾನೆಗಳಿಗೆ ಬೇಕಾದ ಆಹಾರವನ್ನು ನೆಡುತ್ತಿಲ್ಲ. ಅರಣ್ಯ ಇಲಾಖೆಯು ಅರಣ್ಯದಲ್ಲಿ ಕಾಡಾನೆಗಳಿಗೆ ಬೇಕಾದ ಆಹಾರದ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ತೇಗದ ಮರಗಳನ್ನು ಕಡಿದು ತಾವೇ ಅರಣ್ಯದಲ್ಲಿ ಬಿದಿರು ಸೇರಿದಂತೆ ಕಾಡಾನೆಗಳಿಗೆ ಬೇಕಾದ ಆಹಾರವನ್ನು ನೆಟ್ಟು ಬೆಳೆಸಬೇಕೆಂದರು.

ಕಾರ್ಮಿಕ ಮುಖಂಡ ಪಿ.ಆರ್ ಭರತ್, ಕಾರ್ಮಿಕ ಮುಖಂಡ ಎನ್.ಡಿ ಕುಟ್ಟಪ, ರೈತ ಸಂಘದ ಮುಖಂಡ ಆದೇಂಗಡ ಅಶೋಕ್, ನೆಲ್ಲಮಕ್ಕಡ ವಿವೇಕ್, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಗಣಪತಿ, ಉದ್ದಪಂಡ ಜಗತ್ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭ ಸಣ್ಣ ಬೆಳೆಗಾರರ ಸಂಘದ ಕಾರ್ಯದರ್ಶಿ ಕೆ.ಪಿ ಗಣಪತಿ, ಬೆಳೆಗಾರರಾದ ನಡಿಕೇರಿಯಂಡ ಮಾಚಯ್ಯ, ಮಂಡೇಪಂಡ ಅರ್ಜುನ್, ಪ್ರವೀಣ್ ಬೋಪಯ್ಯ,  ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ಬೆಳೆಗಾರರು, ರೈತರು ಹೆಚ್ಚಿಸ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಲಹೆಯನ್ನು ನೀಡಿದರು. ಕಾರ್ಯಕ್ರಮವನ್ನು ಸಿದ್ದಾಪುರದ ಕಾಫಿ ಬೆಳೆಗಾರರಾದ ಮಂಡೇಂಪಂಡ ಪ್ರವೀಣ್ ಬೋಪಯ್ಯ ಆಯೋಜಿಸಿದ್ದರು.

ಕಾರ್ಯಕ್ರಮವನ್ನು ಚೇರಂಡ ನಂದ ಸುಬ್ಬಯ್ಯ ಸ್ವಾಗತಿಸಿ, ರೆಜಿತ್ ಕುಮಾರ್ ಗುಹ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News