ಹಜ್ ಸಬ್ಸಿಡಿ: ಕೊಟ್ಟಂತೆ ಮಾಡಿ ಕಿತ್ತುಕೊಳ್ಳುವ ಪ್ರಹಸನಕ್ಕೆ ಕೊನೆ

Update: 2018-01-17 03:45 GMT

ಕೋತಿ ಬೆಣ್ಣೆ ತಿಂದು ಮೇಕೆಯ ಮೂತಿಗೆ ಒರೆಸಿತಂತೆ. ಈವರೆಗೆ ಹಜ್ ಸಬ್ಸಿಡಿಯ ಹೆಸರಿಲ್ಲಿ ನಡೆಯುತ್ತಾ ಬಂದಿರುವುದಕ್ಕೆ ಈ ಗಾದೆ ಸರಿಯಾಗಿ ಹೊಂದುತ್ತದೆ. ಸುಪ್ರೀಂಕೋರ್ಟ್ ಈ ಹಿಂದೆ ನೀಡಿದ ಸೂಚನೆಯಂತೆ ಹಜ್ ಸಬ್ಸಿಡಿಯನ್ನು ರದ್ದು ಮಾಡುವ ಮೂಲಕ ಸರಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕೋತಿಯ ಕೈಯಿಂದ ಬೆಣ್ಣೆಯನ್ನು ಕಿತ್ತುಕೊಳ್ಳುವ ಮೂಲಕ, ಬೆಣ್ಣೆಯನ್ನು ತಿಂದ ಆರೋಪದಿಂದ ಮೇಕೆಯನ್ನು ಮುಕ್ತಗೊಳಿಸಿದಂತಾಗಿದೆ. ಏರ್‌ಇಂಡಿಯಾದ ಖಾಸಗಿಕರಣಕ್ಕೆ ಪೂರಕವಾದ ಬೆಳವಣಿಗೆ ಇದು. ಇದರ ಜೊತೆಗೆ ಬೆಣ್ಣೆಯನ್ನು ನಿಜವಾದ ಅರ್ಥದಲ್ಲಿ ಸದುಪಯೋಗಪಡಿಸುವ ಕುರಿತಂತೆಯೂ ಸರಕಾರ ಭರವಸೆ ವ್ಯಕ್ತಪಡಿಸಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ನೀಡಿರುವ ಹೇಳಿಕೆಯಂತೆ, ಈ ಸಬ್ಸಿಡಿಯ ಸುಮಾರು 700 ಕೋಟಿ ರೂ.ಯನ್ನು ಮುಸ್ಲಿಮ್ ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಮುಸ್ಲಿಮರು ಹೃದಯಪೂರ್ವಕವಾಗಿ ಸ್ವಾಗತಿಸಬೇಕಾದ ವಿಷಯ ಇದು.

ಹಜ್ ಸಬ್ಸಿಡಿಯ ಹೆಸರಿನಲ್ಲಿ ಪಕ್ಷಗಳು ನಡೆಸುತ್ತಾ ಬಂದಿರುವ ರಾಜಕೀಯಕ್ಕೆ ಮುಸ್ಲಿಮರು ಸದಾ ಬಲಿಪಶುವಾಗುತ್ತಾ ಬಂದಿದ್ದಾರೆ. ಬಹುಶಃ ಈ ಸಬ್ಸಿಡಿ ಇಲ್ಲದೇ ಇದ್ದಿದ್ದರೆ ಮುಸ್ಲಿಮರಿಗೆ ಹಜ್ ಯಾತ್ರೆಯೇ ಅಸಾಧ್ಯವೋ ಎಂಬಂತಹ ಹುಸಿ ನಂಬಿಕೆಯನ್ನು ಮುಸ್ಲಿಮೇತರರಲ್ಲಿ ರಾಜಕೀಯ ಪಕ್ಷಗಳು ಬಿತ್ತುವಲ್ಲಿ ಈಗಾಗಲೇ ಯಶಸ್ವಿಯಾಗಿವೆ. ಆದರೆ ಹಜ್ ಯಾತ್ರೆಯಿಂದ ವಿಮಾನ ಸಂಸ್ಥೆಗಳು, ಮಧ್ಯವರ್ತಿಗಳು ದೋಚುತ್ತಿರುವ ಹಣದ ಕುರಿತಂತೆ ಯಾರೂ ಮಾತನಾಡುತ್ತಿರಲಿಲ್ಲ. ಪರಿಣಾಮವಾಗಿ, ಸ್ವತಃ ಮುಸ್ಲಿಮರೇ, ಈ ಸಬ್ಸಿಡಿಯಿಂದ ತಮಗೇನೋ ಭಾರೀ ಉಪಕಾರವನ್ನು ಸರಕಾರ ಮಾಡುತ್ತಿದೆ ಎಂದು ನಂಬುವಂತಾಗಿತ್ತು. ಹಜ್ ಸಬ್ಸಿಡಿಗೆ ಸುತ್ತಿಕೊಂಡ ಹುಸಿ ವಾದಗಳೆಲ್ಲ ಅದರ ರದ್ದತಿಯಿಂದ ಕಳಚಿಬೀಳಲಿದೆ. ನಿಜಕ್ಕೂ ಈವರೆಗೆ ಹಜ್ ಸಬ್ಸಿಡಿಯ ಲಾಭವನ್ನು ಅನುಭವಿಸಿಕೊಂಡು ಬಂದವರು ಯಾರು ಎನ್ನುವುದು ದೇಶಕ್ಕೆ ಗೊತ್ತಾಗಲಿದೆ. ಮುಸ್ಲಿಮರ ತುಷ್ಟೀಕರಣ ನಡೆಯುತ್ತಿದೆ ಎಂದು ಮುಸ್ಲಿಮೇತರರನ್ನು ಪ್ರಚೋದಿಸುವುದಕ್ಕೆ ಸಂಘಪರಿವಾರ, ಆರೆಸ್ಸೆಸ್‌ಗೆ ಒಂದು ಅಸ್ತ್ರ ಕಡಿಮೆಯಾಗಲಿದೆ.

ಹಜ್ ಯಾತ್ರೆ ಮುಸ್ಲಿಮರ ಮೂಲಭೂತ ನಂಬಿಕೆಗಳಲ್ಲಿ ಮಹತ್ತರ ಸ್ಥಾನವನ್ನು ಪಡೆದುಕೊಂಡಿದೆ. ಇದನ್ನು ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಆರೋಗ್ಯ, ಹಣ ಇತ್ಯಾದಿಗಳಲ್ಲಿ ಸಮರ್ಥನಾದವನಿಗಷ್ಟೇ ಈ ಯಾತ್ರೆಯನ್ನು ಇಸ್ಲಾಮ್ ಧರ್ಮ ಕಡ್ಡಾಯಗೊಳಿಸಿದೆ. ಹಲವು ದುರ್ಬಲ ವರ್ಗದ ಮುಸ್ಲಿಮರಿಗೂ ಹಜ್ ಯಾತ್ರೆಯ ಕನಸಿರುತ್ತದೆ. ಇಂತಹವರಿಗೆ ಅನುಕೂಲವಾಗಲಿ ಎಂದು ಸರಕಾರ ಹಜ್ ಯಾತ್ರೆಯ ಸಬ್ಸಿಡಿಯನ್ನು ನೀಡುತ್ತಾ ಬಂದಿದೆ.ಆದರೆ ಈ ಸಬ್ಸಿಡಿಯ ಪ್ರಯೋಜನವನ್ನು ನಿಜಕ್ಕೂ ಪಡೆಯುತ್ತಾ ಬಂದಿರುವವರು ಯಾರು? ಬಡ ಮುಸ್ಲಿಮ್ ಹಜ್ ಯಾತ್ರಿಕರಿಗೆ ಎಷ್ಟರ ಮಟ್ಟಿಗೆ ಈ ಸಬ್ಸಿಡಿ ಪ್ರಯೋಜನಕಾರಿಯಾಗಿದೆ? ಸುಮಾರು 700 ಕೋಟಿ ರೂಪಾಯಿಯನ್ನು ಮುಂದಿಟ್ಟುಕೊಂಡು ಸರಕಾರಗಳು ನಡೆಸಿದ ರಾಜಕೀಯಕ್ಕೆ ಮುಸ್ಲಿಮರು ಬಲಿ ಪಶುವಾದರೇ? ಹಜ್ ಯಾತ್ರೆಗೆ ಸಬ್ಸಿಡಿ ನೀಡುತ್ತೇವೆ ಎಂದು ಘೋಷಿಸಿ ಸರಕಾರ ಸಬ್ಸಿಡಿಯನ್ನು ನೀಡುತ್ತಿದ್ದುದು ಏರ್ ಇಂಡಿಯಾಕ್ಕೆ. ಹಜ್ ಯಾತ್ರೆಯ ಸಬ್ಸಿಡಿ ಒಪ್ಪಂದವನ್ನು ಸರಕಾರ ಹೊಂದಿರುವುದು ಏರ್ ಇಂಡಿಯಾ ಮತ್ತು ಸೌದಿ ಏರ್‌ಲೈನ್ಸ್‌ಗಳೊಂದಿಗೆ. ಹಜ್ ಯಾತ್ರಿಕರು ಏರ್ ಇಂಡಿಯಾದ ದುಬಾರಿ ಒಪ್ಪಂದಕ್ಕೆ ತಲೆಬಾಗಬೇಕಾಗುತ್ತದೆ. ಇದಾದ ಬಳಿಕ, ಸರಕಾರ ಅದನ್ನು ಈ 700 ಕೋಟಿ ರೂಪಾಯಿಯಲ್ಲಿ ಸರಿದೂಗಿಸುತ್ತದೆ. ಒಂದು ರೀತಿಯಲ್ಲಿ ಏರ್‌ಇಂಡಿಯಾದ ನಷ್ಟವನ್ನು ಸರಿತೂಗಿಸಲು ಹಜ್ ಯಾತ್ರಿಕರ ಹಣವನ್ನು ಸರಕಾರ ಬಳಸುತ್ತಿತ್ತು.

ನಿಜಕ್ಕೂ, ಈ ಒಪ್ಪಂದದಿಂದ ಹಿಂದೆ ಸರಿದು, ಜಾಗತಿಕ ಟೆಂಡರ್ ಕರೆದು ಆ ಮೂಲಕ ಹಜ್ ಯಾತ್ರೆಯನ್ನು ಸರಕಾರ ಹಮ್ಮಿಕೊಂಡರೆ ಅದರಿಂದ ಸರಕಾರಕ್ಕೂ ಲಾಭ. ಹಜ್ ಯಾತ್ರೆಗೆ ತೆರಳುವ ಮುಸ್ಲಿಮರಿಗೂ ಲಾಭವಿದೆ. ಬಹುಶಃ ಏರ್ ಇಂಡಿಯಾ ಖಾಸಗಿರಣದ ಪ್ರಕ್ರಿಯೆಗಳು ಆರಂಭಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಇದರ ಏಕಸ್ವಾಮಿತ್ವ ಅಳಿಯಲಿದೆ ಮತ್ತು ಯಾತ್ರಿಕರಿಗೆ ಪ್ರಯಾಣ ದರ ಇನ್ನಷ್ಟು ಅಗ್ಗವಾಗುವ ಸಾಧ್ಯತೆಗಳಿವೆ. ಹಜ್ ಯಾತ್ರೆಯೆನ್ನುವುದು ಇಸ್ಲಾಮಿನಲ್ಲಿ ವರ್ಷಕ್ಕೊಮ್ಮೆಯೋ ಐದುವರ್ಷಕ್ಕೊಮ್ಮೆಯೋ ಆಚರಿಸುವುದಕ್ಕಿರುವ ಕರ್ಮವಲ್ಲ. ಜೀವಮಾನದಲ್ಲಿ ಒಮ್ಮೆ ಕೈಗೊಳ್ಳುವುದಕ್ಕಿರುವುದು. ಆದರೆ ಕೆಲವರು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಹೆಚ್ಚಿಸಲು, ಶ್ರೀಮಂತಿಕೆಯನ್ನು ಪ್ರದರ್ಶಿಸಲು ಎರಡು ವರ್ಷಕ್ಕೊಮ್ಮೆ, ಐದು ವರ್ಷಕ್ಕೊಮ್ಮೆ ಹಜ್ ಯಾತ್ರೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇವರಲ್ಲಿ ಹೆಚ್ಚಿನವರು ಸರಕಾರಿ ಪ್ರಾಯೋಜಿತ ಯಾತ್ರೆಯ ಮೂಲಕ ಹಜ್ ನಿರ್ವಹಿಸುತ್ತಾ ಬಂದಿದ್ದಾರೆ. ಹಜ್ ಯಾತ್ರೆಯ ಸಬ್ಸಿಡಿಯ ಹೆಸರಿನಲ್ಲಿ ನಡೆಯುವ ದಂಧೆ ಇಲ್ಲಿಗೇ ಮುಗಿಯುವುದಿಲ್ಲ. ಪ್ರತೀ ಹಜ್ ಯಾತ್ರೆಯ ಸಂದರ್ಭದಲ್ಲಿ ವಿಐಪಿಗಳ ನಿಯೋಗವೂ ಯಾತ್ರಿಕರೊಂದಿಗೆ ತೆರಳುತ್ತದೆ. ಇದಕ್ಕೂ ಹಜ್ ಯಾತ್ರೆಗೂ ಯಾವುದೇ ಸಂಬಂಧವಿಲ್ಲ. ಹಜ್ ಯಾತ್ರೆಯ ಹೆಸರಿನಲ್ಲಿ ತೆರಳುವ ವಿಐಪಿಗಳು ಈ ಸಂದರ್ಭವನ್ನು ಸಂಪೂರ್ಣ ದುರುಪಯೋಗಪಡಿಸಿಕೊಳ್ಳುತ್ತಾರೆ. ಹಜ್ ಯಾತ್ರೆಯ ವೌಲ್ಯಗಳು ಮತ್ತು ಪಾವಿತ್ರಕ್ಕೆ ಇವರಿಂದಾಗಿ ಧಕ್ಕೆಯುಂಟಾಗಿದೆ.

ದೇವರ ಮುಂದೆ ಬಡವರು, ಶ್ರೀಮಂತರು ಒಂದೇ ಎನ್ನುವ ವೌಲ್ಯದ ತಳಹದಿಯ ಮೇಲೆ ಇಸ್ಲಾಮ್ ನಿಂತಿದೆ. ಹಜ್ ಯಾತ್ರಿಕರು ತಮ್ಮೆಲ್ಲ ಹಣ, ದೌಲತ್ತು, ಅಹಂಕಾರಗಳನ್ನು ಬದಿಗಿಟ್ಟು, ವಿರಾಗಿಗಳಂತೆ ಕಾಬಾದೆಡೆಗೆ ಧಾವಿಸುತ್ತಾರೆ. ಅಲ್ಲಿ ವಿಐಪಿಗಳಿಗೊಂದು, ಬಡವರಿಗೊಂದು ಎನ್ನುವಂತಹ ಭೇದಭಾವವಿಲ್ಲ. ಹೀಗಿರುವಾಗ, ಸರಕಾರ ಮುಸ್ಲಿಮರ ಹೆಸರಲ್ಲಿ ಬಿಡುಗಡೆ ಮಾಡಿದ ಹಣವನ್ನು ಈ ವಿಐಪಿಗಳು ದುಂದುವೆಚ್ಚ ಮಾಡುತ್ತಿರುವುದು ಎಷ್ಟು ಸರಿ? ಹೀಗೆ ಮುಸ್ಲಿಮರ ಧಾರ್ಮಿಕ ನಿಲುವುಗಳ ಕಾರಣದಿಂದಲೂ ಸಬ್ಸಿಡಿಯ ಪ್ರಹಸನ ರದ್ದಾಗುವುದು ಅಗತ್ಯವಿತ್ತು. ಈ ದೇಶದ ಮುಸ್ಲಿಮರ ಸಂಖ್ಯೆಗೆ ಮತ್ತು ಅವರ ಬಡತನಕ್ಕೆ ಹೋಲಿಸಿದರೆ 700 ಕೋಟಿ ರೂ. ಒಂದು ಜುಜುಬಿ ಮೊತ್ತ. ಮುಸ್ಲಿಮರಿಂದಲೇ ಕಿತ್ತು, ಮುಸ್ಲಿಮರಿಗೆ ಕೊಟ್ಟಂತೆ ಮಾಡುವ ಸಬ್ಸಿಡಿ ಇದೀಗ ಮುಸ್ಲಿಮ್ ಮಹಿಳೆಯರ ವಿದ್ಯಾಭ್ಯಾಸದಂತಹ ಕಾರ್ಯಗಳಿಗೆ ಬಳಕೆಯಾಗುವುದರಿಂದ ಮುಸ್ಲಿಮರು ನಿಜವಾದ ಅರ್ಥದಲ್ಲಿ ಆ ಹಣದ ಫಲಾನುಭವಿಗಳಾಗಿದ್ದಾರೆ. ಇದೇ ಸಂದರ್ಭದಲ್ಲಿ ಏಕಸ್ವಾಮ್ಯತೆ ಅಳಿದು ಪೈಪೋಟಿ ನಡೆದರೆ, ಈಗಿನ ದರಕ್ಕಿಂತಲೂ ಕಡಿಮೆ ದರಗಳಿಗೆ ಹೆಚ್ಚು ಸೌಲಭ್ಯಗಳ ಜೊತೆಗೆ ಯಾತ್ರಿಕರಿಗೆ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಯಾವ ಕಾರಣಕ್ಕಾಗಿಯೇ ಇರಲಿ, ಸರಕಾರದ ಈ ನಿರ್ಧಾರ ದೇಶದ ಮುಸ್ಲಿಮರಿಗೆ ಒಳಿತನ್ನೇ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News