ಸೆಲ್ಫೀ ವೀಡಿಯೋ ಮಾಡಿ ವಿಷ ಸೇವಿಸಿ ಆಟೋ ಚಾಲಕ ಆತ್ಮಹತ್ಯೆ

Update: 2018-01-17 13:10 GMT

ಶಿವಮೊಗ್ಗ, ಜ. 17: ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾಧ್ಯಕ್ಷನೋರ್ವನ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮೊಬೈಲ್‍ನಲ್ಲಿ ಸೆಲ್ಫೀ ವೀಡಿಯೋ ಮಾಡಿ ವಿಷ ಸೇವಿಸಿ, ಇಲ್ಲಿನ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಟೋ ಚಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಟಿಪ್ಪುನಗರ ನಿವಾಸಿ ನೂರುಲ್ಲಾ (48) ಮೃತಪಟ್ಟ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಪ್ರವೀಣ್ ಶೆಟ್ಟಿ ಬಣದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ಕೋಟ್ಯಾನ್ ಹಾಗೂ ಶಬ್ಬೀರ್ ಎಂಬವರು ತನಗೆ ಕಿರುಕುಳ ನೀಡುತ್ತಿರುವುದಾಗಿ ನೂರುಲ್ಲಾರವರು ದೂರಿ, ಜ. 11 ರಂದು ವಿಷ ಸೇವಿಸಿದ್ದರು. ತಕ್ಷಣವೇ ಕುಟುಂಬ ಸದಸ್ಯರು ಅವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಣವೇನು?: ಮಂಜುನಾಥ್ ಕೋಟ್ಯಾನ್ ಅಧ್ಯಕ್ಷರಾಗಿರುವ ಕರವೇ ಬಣದಲ್ಲಿ ನೂರುಲ್ಲಾರವರು ಗುರುತಿಸಿಕೊಂಡಿದ್ದರು. ಅದೇ ಘಟಕದ ಆಟೋ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಜೋತ್ಸವ ಕಾರ್ಯಕ್ರಮಕ್ಕಾಗಿ ನೂರುಲ್ಲಾರವರು ಸಾವಿರಾರು ರೂ.ಗಳನ್ನು ಸಂಗ್ರಹಿಸಿ ಸಂಘಟನೆಯ ಅಧ್ಯಕ್ಷರಿಗೆ ನೀಡಿದ್ದರು. ಆದರೆ ರಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಇದರಿಂದ ಬೇಸರಗೊಂಡ ನೂರುಲ್ಲಾರವರು ಆ ಸಂಘಟನೆಯಿಂದ ಹೊರಬಂದು ನಾರಾಯಣಗೌಡ ಬಣಕ್ಕೆ ಸೇರ್ಪಡೆಗೊಂಡಿದ್ದರು ಎನ್ನಲಾಗಿದೆ.

ಈ ಮೊದಲು ಆಟೋ ಖರೀದಿಗಾಗಿ ನೂರುಲ್ಲಾರವರು ಮಂಜುನಾಥ್ ಕೋಟ್ಯಾನ್‍ರಿಂದ 15 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಆದರೆ ಸಾಲ ತೀರಿಸಲು ಆಗಿರಲಿಲ್ಲ. ಸಂಘಟನೆ ತೊರೆದಿದ್ದರಿಂದ ಆಕ್ರೋಶಗೊಂಡಿದ್ದ ಮಂಜುನಾಥ್‍ರವರು, 15 ಸಾವಿರ ರೂ. ಸಾಲಕ್ಕೆ 20 ಸಾವಿರ ರೂ. ಸೇರಿಸಿ ನೀಡುವಂತೆ ಆಗ್ರಹಿಸಿದ್ದರು. ಈ ಕುರಿತಂತೆ ಸಾಕಷ್ಟು ಹಿಂಸೆ ನೀಡಿದ್ದರೆನ್ನಲಾಗಿದ್ದು, ಇದನ್ನೆಲ್ಲ ಸೆಲ್ಪಿ ವೀಡಿಯೋದಲ್ಲಿ ದಾಖಲಿಸಿ ನೂರುಲ್ಲಾರವರು ವಿಷ ಸೇವಿಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News