×
Ad

ಲೋಫರ್ ಪದ ಬಳಕೆಗೆ ವೈಯುಕ್ತಿಕವಾಗಿ ವಿಷಾದವಿದೆ: ವೈ.ಹೆಚ್.ಹುಚ್ಚಯ್ಯ

Update: 2018-01-17 18:51 IST

ತುಮಕೂರು.ಜ.17:ಕೆ.ಪಿ.ಸಿ.ಸಿ.ಅಧ್ಯಕ್ಷರು ಹಾಗೂ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಜಿ.ಪರಮೇಶ್ವರ್ ಅವರನ್ನು ಲೋಫರ್ ಎಂಬ ಪದದಿಂದ ಸಂಬೋಧಿಸಿರುವುದು ವೈಯುಕ್ತಿಕವಾಗಿ ನನಗೆ ನೋವು ತಂದಿದೆ.ಆದರೆ ಸಾರ್ವಜನಿಕವಾಗಿ ಕ್ಷಮೆ ಕೇಳುವಂತಹ ಯಾವುದೇ ತಪ್ಪು ಮಾಡಿಲ್ಲ ಎಂದು ಬಿಜೆಪಿ ಮುಖಂಡ ವೈ.ಹೆಚ್.ಹುಚ್ಚಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಒಳಮೀಸಲಾತಿ ಕಲ್ಪಿಸುವ ವಿಚಾರದಲ್ಲಿ ಕೊರಟಗೆರೆ ಕ್ಷೇತ್ರದ ಪ್ರವಾಸದಲ್ಲಿದ್ದಾಗ ಒಂದು, ಬೆಂಗಳೂರಿನಲ್ಲಿದ್ದಾಗ ಒಂದು ಮಾತನಾಡುವ ಕೆ.ಪಿ.ಸಿ.ಸಿ.ನಡವಳಿಗೆ ಬೇಸತ್ತು ಈ ಪದ ಬಳಸಿದ್ದೇನೆ. ಜೊತೆಗೆ ಲೋಫರ್ ಎಂಬುದು ಯಾವುದೇ ಅಸಂವಿಧಾನಿಕ ಪದವಲ್ಲ.ಅದರೆ ಈ ವಿಚಾರವನ್ನೇ ಮುಂದಿಟ್ಟು ಕೊಂಡು ನನ್ನ ಮೇಲೆ ಕೇಸು ಹಾಕಿಸಿ, ಬೆದರಿಸುವ ತಂತ್ರ ಅನುಸರಿಸುತ್ತಿದ್ದು,ಇವುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು.

ನನಗೆ ಜೈಲು ಹೊಸದಲ್ಲ. ಈ ಹಿಂದೆ ವೈ.ಕೆ.ರಾಮಯ್ಯ ಅವರ ಜೊತೆಗೆ ಹೇಮಾವತಿ ನೀರಿಗಾಗಿ ಹೋರಾಟ ನಡೆಸುವ ವೇಳೇ 19 ದಿನಗಳ ಕಾಲ ಕೇಂದ್ರ ಕಾರಾಗೃಹ ವಾಸ ಅನುಭವಿಸಿದ್ದೇನೆ. ಕಾರ್ಯಕರ್ತನ ಹೆಸರಿನಲ್ಲಿ ಈ ರೀತಿ ಕೇಸು ಹಾಕಿ ಹೆದರಿಸುವ ತಂತ್ರಕ್ಕೆ ಬೆದರುವುದಿಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ್ ಅವರ ಇಬ್ಬಗೆಯ ನೀತಿ ವಿರುದ್ದ ನನ್ನ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ವೈ.ಹೆಚ್.ಹುಚ್ಚಯ್ಯ ನುಡಿದರು.

ಜನವರಿ 13 ರಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಸಂಬಂಧಿಸಿದಂತೆ ನಡೆದ ಚರ್ಚೆಗಳ ಸಾರಾಂಶ ಎಲ್ಲಾ ಪತ್ರಿಕೆಗಳಲ್ಲಿ ವರದಿಯಾಗಿದೆ.ಕಾಂಗ್ರೆಸ್ ಪಕ್ಷದವರೇ ಆದ ಕೆ.ಹೆಚ್.ಮುನಿಯಪ್ಪ ಪಕ್ಷಕ್ಕೆ ಆಗುವ ನಷ್ಟವನ್ನು ತಡೆಯಲು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿ ಸುಳ್ಳು ಎಂದು ಹೇಳಿರುವ ಸಾಧ್ಯತೆ ಇದೆ ಎಂದ ವೈ.ಹೆಚ್.ಹುಚ್ಚಯ್ಯ,ಒಳ ಮೀಸಲಾತಿ ಜಾರಿಗೆ ಡಾ.ಜಿ.ಪರಮೇಶ್ವರ್ ಅಡ್ಡಗಾಲು ಹಾಕದಿದ್ದರೆ ಇಷ್ಟು ವೇಳೆಗಾಗಲೇ ಅಕ್ಕಪಕ್ಕದ ರಾಜ್ಯಗಳ ರೀತಿ ವರದಿ ಜಾರಿಯಾಗಿ ಬಹಳ ದಿನಗಳೇ ಆಗಿರುತ್ತಿದ್ದವು.ಈ ವಿಚಾರದಲ್ಲಿ ಕೆ.ಪಿ.ಸಿ.ಸಿ.ಅಧ್ಯಕ್ಷರು ಏನು ಸಮಜಾಯಿಸಿ ನೀಡಿದರೂ ಮಾದಿಗ ಸಮುದಾಯ ಈ ಬಾರಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಡಾ.ಜಿ.ಪರಮೇಶ್ವರ್ ಸರಕಾರಿ ಅಧಿಕಾರಿಗಳ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು, ಒಂದೊಂದು ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಂದ ಆ ಸಮುದಾಯಕ್ಕೆ ಸೇರಿದ ಮತದಾರರ ಸಭೆ ನಡೆಸಿ,ಆಸೆ, ಅಮೀಷಗಳನ್ನು ಒಡ್ಡಿ ಮತ ಪಡೆಯುವ ಪ್ರಯತ್ನ ನಡೆಸುತ್ತಿದ್ದು, ಈ ಬಗ್ಗೆ ಸೂಕ್ತ ಕಾಲದಲ್ಲಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದ ವೈ.ಹೆಚ್.ಹುಚ್ಚಯ್ಯ, ಜನವರಿ 11 ರಂದು ಕೊರಟಗೆರೆಯಲ್ಲಿ ನಡೆದ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಸೇರಿದ್ದ ಜನಸ್ತೋಮವನ್ನು ನೋಡಿ, ಗಲಿಬಿಲಿಯಾಗಿರುವ ಅವರು,ಪೊಲೀಸರ ಮೂಲಕ ನನ್ನನ್ನು ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ತಂತ್ರಗಾರಿಕೆ ಮಾಡುತ್ತಿದ್ದು,ಇದಕ್ಕೆ ಸೊಪ್ಪು ಹಾಕುವುದಿಲ್ಲ. ಅಲ್ಲದೆ ನಾನು ಬೆಳೆದು ಬಂದ ಪರಿಸರ  ಕೆ.ಪಿ.ಸಿ.ಸಿ.ಅಧ್ಯಕ್ಷರಿಗಿಂತಲು ಉತ್ತಮವಾಗಿವೆ. ಇವರಿಂದ ಸಂಸ್ಕೃತಿಯ ಪಾಠ ಕಲಿಯಬೇಕಾಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಹೇಳಿಕೆಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಶಿವರುದ್ರಯ್ಯ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News