ಕನಿಷ್ಠ ವೇತನ ಮತ್ತು ಪಿಂಚಣಿಗಾಗಿ ಆಗ್ರಹ: ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

Update: 2018-01-17 17:10 GMT

ಮಡಿಕೇರಿ, ಜ.17: 42ನೇ ಇಂಡಿಯನ್ ಲೇಬರ್ ಕಾನ್ಫರೆನ್ಸ್ ನ ತೀರ್ಮಾನದ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ.18 ಸಾವಿರ ವೇತನ ಹಾಗೂ ರೂ.3000 ಸಾವಿರ ಪಿಂಚಣಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.

ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಮೆರವಣಿಗೆ ಮೂಲಕ ತೆರಳಿದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಗರ್ಭಿಣಿ ಹಾಗೂ ಬಾಣಂತಿಯರ ಹಿತದೃಷ್ಟಿಯಿಂದ ಮಾತೃಪೂರ್ಣ ಯೋಜನೆಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ. ಆದರೆ ಕೊಡಗು ಗುಡ್ಡಗಾಡು ಪ್ರದೇಶವನ್ನು ಹೊಂದಿರುವುದರಿಂದ ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಕೇಂದ್ರಗಳಿಗೆ 2, 3 ಕಿ. ಮೀ ನಡೆದು ಹೋಗುವುದು ಕಷ್ಟಕರವಾಗಿದೆ. ಆದ್ದರಿಂದ  ರಾಜ್ಯ ಸರ್ಕಾರದ ಯೋಜನೆಗೆ ಸ್ಪಂದಿಸಲು ಸಾಧ್ಯವಿಲ್ಲ ಎನ್ನುವ ಅಸಹಾಯಕತೆಯನ್ನು ಕಾರ್ಯಕರ್ತೆಯರು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು. ಗರ್ಭಿಣಿ ಮತ್ತು ಬಾಣಂತಿಯರನ್ನು ಅಂಗನವಾಡಿ ಕೇಂದ್ರಗಳಿಗೆ ಕರೆಸಿ ಊಟ ವಿತರಿಸುವುದಕ್ಕಿಂತ ಪೌಷ್ಠಿಕ ಆಹಾರವನ್ನು ಅವರ ಮನೆಗಳಿಗೆ ತಲುಪಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಬೇಡಿಕೆಗಳು
42ನೇ ಇಂಡಿಯನ್ ಕಾನ್ಫರೆನ್ಸ್ ತೀರ್ಮಾನದ ಪ್ರಕಾರ ಸ್ಕೀಂ ವರ್ಕರ್‍ಗೆ ತಿಂಗಳಿಗೆ ರೂ.18 ಸಾವಿರ ವೇತನ ಹಾಗೂ ರೂ. 3 ಸಾವಿರ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕು, ಮಾತೃಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ ನಡೆಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಹಾಲಿ ಚಾಲ್ತಿಯಲ್ಲಿದ್ದ ಟೇಕ್‍ಹೋಂನ್ನು ಗರ್ಭಿಣಿ ಮತ್ತು ಬಾಣಂತಿಯರಿಗೆ ವಿತರಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳಿಗೆ ಅಂಗನವಾಡಿ ಸಹಾಯಕಿಯರನ್ನು ನೇಮಿಸಿ ಪೂರ್ಣ ಪ್ರಮಾಣದಲ್ಲಿ ಅಂಗನವಾಡಿಯಾಗಿ ಪರಿವರ್ತಿಸಬೇಕು. ಅನುಭವ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಹಾಯಕಿಯರಿಗೆ ವೇತನ ಹೆಚ್ಚಳ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ  ಕೊಡಗು ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ತಾರಾಮಣಿ, ಕಾರ್ಯದರ್ಶಿ ಬಿ.ಎಂ.ಪುಷ್ಪ, ಖಜಾಂಚಿ ಎನ್.ಎ.ಗೀತಾ, ತಾಲ್ಲೂಕು ಅಧ್ಯಕ್ಷರಾದ ನಾಗರತ್ನ, ಕಾರ್ಯದರ್ಶಿ ಪವಿತ್ರ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಚಂದ್ರಕಲಾ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷರಾದ ಸುಮಿತ್ರಬಾಯಿ ಹಾಗೂ ಅಂಗನವಾಡಿ ಕಾರ್ಯಕರ್ತರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News