ಮಂಡ್ಯ: ಗೋವಾ ಸಚಿವರ ಹೇಳಿಕೆ ಖಂಡಿಸಿ ರಸ್ತೆ ತಡೆ
ಮಂಡ್ಯ, ಜ.17: ಕನ್ನಡಿಗರ ಬಗೆಗಿನ ಗೋವಾ ಸಚಿವ ಪಾಲೇಕರ್ ಹೇಳಿಕೆಯನ್ನು ಖಂಡಿಸಿ ರೈತಸಂಘದ ಕಾರ್ಯಕರ್ತರು ಬುಧವಾರ ನಗರದಲ್ಲಿ ರಸ್ತೆತಡೆ ನಡೆಸಿದರು.
ಕಾವೇರಿವನದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಘೋಷಣೆ ಕೂಗಿದ ಅವರು, ಕೂಡಲೇ ಪಾಲೇಕರ್ ಕನ್ನಡಿಗರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.
ಪಾಲೇಕರ್ ಹೇಳಿಕೆಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಪಾಲೇಕರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ತಾಕೀತು ಮಾಡಿದರು.
ಮಹಾದಾಯಿ ಕಳಸಾ ಬಂಡೂರಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಲಾದರೂ ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್, ಹರೀಶ್, ಮಹೇಂದ್ರ, ರೇಣುಕುಮಾರ್, ನವೀನ್, ದೇವರಾಜ್, ಲತಾ ಶಂಕರ್, ರಾಮಕೃಷ್ಣಯ್ಯ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.