ಇಸ್ರೇಲ್ ಪ್ರಧಾನಿಗೆ ಸ್ವಾಗತ ಸರಿಯಲ್ಲ

Update: 2018-01-18 04:05 GMT

ಸ್ವಾತಂತ್ರಾ ನಂತರ ಭಾರತ ಅನುಸರಿಸಿಕೊಂಡು ಬರುತ್ತಿರುವ ನೀತಿ ಮತ್ತು ಧೋರಣೆಗಳನ್ನೆಲ್ಲ ಒಮ್ಮಿಂದೊಮ್ಮೆಲೇ ಬದಲಾವಣೆ ಮಾಡಲು ಹೊರಟಿರುವ ನರೇಂದ್ರ ಮೋದಿ ಸರಕಾರ ವಿದೇಶಾಂಗ ನೀತಿಗೂ ಅಡ್ಡಹಾದಿ ಹಿಡಿಸಿದೆ. ಜನಾಂಗ ದ್ವೇಷಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ದೇಶಕ್ಕೆ ಬರಮಾಡಿಕೊಳ್ಳುವ ಮೂಲಕ ಸದಾ ಫೆಲೆಸ್ತೀನ್ ಪರವಾಗಿ ಇರುತ್ತಿದ್ದ ನಮ್ಮ ದೇಶದ ವಿದೇಶಾಂಗ ಧೋರಣೆಗೆ ಮೋದಿ ಸರಕಾರ ತಿಲಾಂಜಲಿ ಹಾಡಿದೆ. ಇಸ್ರೇಲ್ ಪ್ರಧಾನಿಯನ್ನು ಬರಮಾಡಿಕೊಳ್ಳುವುದು ಮಾತ್ರವಲ್ಲ ಅವರನ್ನು ಕ್ರಾಂತಿಕಾರಿ ನಾಯಕ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಸೈಬರ್ ಭದ್ರತೆ ಸೇರಿದಂತೆ 6 ದ್ವಿಪಕ್ಷಿಯ ಒಪ್ಪಂದಗಳಿಗೆ ಅಂಕಿತ ಹಾಕಿದ್ದಾರೆ. ಇಸ್ರೇಲ್ ಪ್ರಧಾನಿಯ ಭಾರತ ಭೇಟಿಯನ್ನು ಪ್ರಗತಿಪರ ದೇಶಪ್ರೇಮಿ ಸಂಘಟನೆಗಳು ಸಹಜವಾಗಿಯೇ ವಿರೋಧಿಸಿವೆ. ಭಾರತ ಕಳೆದ ಏಳು ದಶಕಗಳಿಂದ ಅನುಸರಿಸಿಕೊಂಡು ಬಂದಿರುವ ಸ್ವತಂತ್ರ ವಿದೇಶಾಂಗ ನೀತಿಗೆ ತಿಲಾಂಜಲಿ ನೀಡಿ ಸಂಘಪರಿವಾರದ ಆದೇಶದಂತೆ ಇಸ್ರೇಲ್ ಜೊತೆ ಬಾಂಧವ್ಯ ಬೆಳೆಸಿಕೊಂಡಿರುವುದನ್ನು ಅನೇಕ ಚಿಂತಕರೂ ಖಂಡಿಸಿದ್ದಾರೆ.

ಇತ್ತೀಚೆಗೆ ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ ಭಾರತ ಮತ ಹಾಕಿದ್ದು ನಿಜ. ಆದರೆ, ತದ್ವಿರುದ್ಧವಾಗಿ ಇಸ್ರೇಲ್ ಪ್ರಧಾನಿಯನ್ನು ಭಾರತಕ್ಕೆ ಬರಮಾಡಿಕೊಂಡಿದ್ದು ಸರಿಯಲ್ಲ.

ಪ್ರಧಾನಿ ನರೇಂದ್ರ ಮೋದಿ ಕೂಡಾ ಕೆಲ ತಿಂಗಳ ಹಿಂದೆ ಇಸ್ರೇಲ್‌ಗೆ ಹೋಗಿ ಬಂದಿದ್ದರು. ಉಭಯ ದೇಶಗಳ ಬಾಂಧವ್ಯ ಸುಧಾರಣೆ ಬಗ್ಗೆ ಆಗಲೇ ಒಂದು ತೀರ್ಮಾನಕ್ಕೆ ಬರಲಾಗಿತ್ತು. ಫೆಲೆಸ್ತೀನ್ ಪ್ರಜೆಗಳನ್ನು ಅವರ ತಾಯ್ನೆಡಿನಿಂದ ಹೊರದಬ್ಬಿ, ಅವರ ದೇಶವನ್ನು ಅಪಹರಣ ಮಾಡಿದ ಯಹೂದಿಗಳು ಜನಾಂಗೀಯ ದ್ವೇಷದ ತಳಹದಿಯ ಮೇಲೆ ಒಂದು ದೇಶವನ್ನು ಕಟ್ಟಿಕೊಂಡರು. ಅಮೆರಿಕವನ್ನು ಹೊರತುಪಡಿಸಿ ಜಗತ್ತಿನ ಎಲ್ಲ ದೇಶಗಳೂ ಇಸ್ರೇಲ್ ಅಸ್ತಿತ್ವವನ್ನು ವಿರೋಧಿಸುತ್ತಾ ಬಂದಿವೆ. ಭಾರತ ಸೇರಿದಂತೆ ಬಹುತೇಕ ದೇಶಗಳು ಇತ್ತೀಚಿನವರೆಗೆ ರಾಜತಾಂತ್ರಿಕ ಸಂಬಂಧವನ್ನೂ ಇಸ್ರೇಲ್ ಜೊತೆಗೆ ಹೊಂದಿರಲಿಲ್ಲ. ಸಂಯುಕ್ತ ರಾಷ್ಟ್ರ ಸಂಸ್ಥೆ ಕೂಡಾ ಇಸ್ರೇಲ್‌ಗೆ ಮಾನ್ಯತೆ ನೀಡಿಲ್ಲ. ನಿತ್ಯವೂ ಬಾಂಬ್ ದಾಳಿಗೆ ಬಲಿಯಾಗುತ್ತಿರುವ ಫೆಲೆಸ್ತೀನಿಯರ ಗೋಳಿನ ಕಥೆ ಇಡೀ ಜಗತ್ತಿಗೇ ಗೊತ್ತಿದೆ.

ಅಲ್ಲಿನ ಮಕ್ಕಳು ಕಣ್ಣುಬಿಡುತ್ತಲೇ ಬಾಂಬ್ ದಾಳಿಯನ್ನು ನೋಡುತ್ತಾರೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಫೆಲೆಸ್ತೀನ್ ಜನರ ಮೇಲೆ ಕಳೆದ ಐವತ್ತು ವರ್ಷಗಳಿಂದ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಡೆಸಿರುವ ಜನಾಂಗೀಯ ದುರಾಕ್ರಮಣ ಮತ್ತು ದಾಳಿಗೆ ಈವರೆಗೆ ಸಾವಿರಾರು ಮಂದಿ ಬಲಿಯಾಗಿದ್ದಾರೆ. ಈ ಸಾವುಗಳ ನಂತರವೂ ಜನತೆಯ ಬದುಕಿಗೆ ನೆಮ್ಮದಿ ಸಿಕ್ಕಿಲ್ಲ. ಸಮಾಜವಾದಿ ಸೋವಿಯತ್ ರಶ್ಯಾ ಅಸ್ತಿತ್ವದಲ್ಲಿದ್ದಾಗ ಈ ನೊಂದ ಜೀವಗಳಿಗಾಗಿ ನೆರವಿನ ಭರವಸೆ ಇತ್ತು. ಆದರೆ, ಸೋವಿಯತ್ ವ್ಯವಸ್ಥೆ ಕುಸಿದುಬಿದ್ದು ಆನಂತರ ಫೆಲೆಸ್ತೀನ್ ಜನರನ್ನು ಕೇಳುವವರೇ ಇಲ್ಲದಂತಾಗಿದೆ. ಫೆಲೆಸ್ತೀನ್ ಜನತೆಯ ನಾಯಕ ಯಾಸಿರ್ ಅರಫಾತ್ ಅವರ ಸಾವು ಕೂಡಾ ಸಂದೇಹಾಸ್ಪದವಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಅಂತಲೇ, ಜಗತ್ತಿನ ಎಲ್ಲಾ ದೇಶಗಳು ಫೆಲೆಸ್ತೀನ್ ಜನರ ಬೇಡಿಕೆಗೆ ಬೆಂಬಲ ನೀಡುತ್ತಾ ಬಂದಿವೆ. ಆದರೆ, ಭಾರತದಲ್ಲಿ ಸಂಘಪರಿವಾರ ನಿಯಂತ್ರಿತ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಫೆಲೆಸ್ತೀನ್ ಜನರಿಗೆ ದ್ರೋಹ ಬಗೆಯಲಾಗಿದೆ.

ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಅಮೆರಿಕದ ವಿದೇಶಾಂಗ ನೀತಿಯೂ ಸಾಕಷ್ಟು ಬದಲಾಗಿದೆ. ಮುಂಚೆ ಅಮೆರಿಕ ಇಸ್ರೇಲ್ ಮತ್ತು ಫೆಲೆಸ್ತೀನ್‌ಗೆ ಮಾನ್ಯತೆ ನೀಡಿತ್ತು. ಆದರೆ, ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಇಸ್ರೇಲ್‌ವೊಂದಕ್ಕೇ ಮಾನ್ಯತೆ ನೀಡಲಾಗಿದೆ. ಟ್ರಂಪ್ ಅಮೆರಿಕದ ಅಧ್ಯಕ್ಷರಾದ ಬಳಿಕ ಮಾಡಿದ ಮೊದಲ ಕೆಲಸವೆಂದರೆ ಆಕ್ರಮಿತ ಪ್ರದೇಶದಲ್ಲಿರುವ ಫೆಲೆಸ್ತೀನ್ ಜನರಿಗೆ ನೀಡುತ್ತಿದ್ದ 221 ಮಿಲಿಯ ಡಾಲರ್ ನೆರವನ್ನು ರದ್ದುಗೊಳಿಸಿದ್ದರು. ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ 700ಕ್ಕೂ ಹೆಚ್ಚು ಯಹೂದಿ ವಸತಿ ಪ್ರದೇಶಗಳನ್ನು ಸ್ಥಾಪಿಸಿದೆ. ಆದರೆ, ಫೆಲೆಸ್ತೀನ್ ಜನರಿಗೆ ದಕ್ಕಿರುವುದು ಕೊಳಚೆ ಪ್ರದೇಶಗಳು ಮಾತ್ರ. ಜಗತ್ತಿನ ಬೇರೆ ಬೇರೆ ಭಾಗಗಳ 75 ಲಕ್ಷ ಯಹೂದಿಯರು ಇಲ್ಲಿ ಬಂದು ನೆಲೆಸಿದ್ದಾರೆ. ಆದರೆ, ಇದೇ ನೆಲದಲ್ಲಿ ಹುಟ್ಟಿಬೆಳೆದ 25 ಲಕ್ಷ ಫೆಲೆಸ್ತೀನಿಯರು ಕುಟುಂಬ ಸಹಿತವಾಗಿ ನಿರಾಶ್ರಿತರಾಗಿ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ.

3 ಸಾವಿರ ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿರುವ ಈ ಭೂ ಪ್ರದೇಶದಲ್ಲಿ ಸೊಲೊಮನ್ ಎಂಬ ದೊರೆಯಿಂದ ಹಿಡಿದು ಗ್ರೀಕರು ಮತ್ತು ರೋಮನ್ನರು ಆಳ್ವಿಕೆ ನಡೆಸಿದ್ದರು. ಯಹೂದಿಯರು, ಅರಬರು ಮತ್ತು ಕ್ರಿಶ್ಚಿಯನ್ನರು ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದರು. ಆದರೆ, 1917ರ ಬಳಿಕ ಈ ಪ್ರದೇಶ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. ಲೀಗ್ ಆಫ್ ನೇಶನ್ಸ್ ತೀರ್ಮಾನದಂತೆ 18ನೇ ಶತಮಾನದಲ್ಲಿ ಯಹೂದಿಗಳು ತಾಯ್ನ್‌ಡಿನ ಸ್ಥಾಪನೆಗಾಗಿ ಚಳವಳಿ ಪ್ರಾರಂಭಿಸಿದ್ದರು. 2,600 ವರ್ಷಗಳ ಕಾಲ ಅಲೆಮಾರಿಗಳಾಗಿ ಬೇರೆ ಬೇರೆ ದೇಶಗಳಲ್ಲಿ ಹರಡಿಕೊಂಡಿದ್ದರು. ಜರ್ಮನಿಯಲ್ಲಿ ಫ್ಯಾಶಿಸ್ಟರು ಅಧಿಕಾರಕ್ಕೆ ಬಂದಾಗ ಅಲ್ಲಿನ ಸರ್ವಾಧಿಕಾರಿ ಹಿಟ್ಲರ್ ಲಕ್ಷಾಂತರ ಯಹೂದಿಗಳನ್ನು ಕೊಂದು ಹಾಕಿದ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಬಳಿಕ ಅಸ್ತಿತ್ವಕ್ಕೆ ಬಂದ ಸಂಯುಕ್ತ ರಾಷ್ಟ್ರ ಸಂಸ್ಥೆ ಬ್ರಿಟನ್‌ನ ವಶದಲ್ಲಿದ್ದ ಫೆಲೆಸ್ತೀನ್ ಪ್ರದೇಶವನ್ನು ಎರಡು ಭಾಗ ಮಾಡಿ ಯಹೂದಿಗಳಿಗೆ ಮತ್ತು ಫೆಲೆಸ್ತೀನ್ ಜನತೆಗೆ ನೆಲೆಸಲು ಅವಕಾಶ ಕಲ್ಪಿಸಿಕೊಟ್ಟಿತು. ಆದರೆ, ಬ್ರಿಟನ್ ಮತ್ತು ಅಮೆರಿಕ ಕುತಂತ್ರ ಮಾಡಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಇಸ್ರೇಲ್ ರಾಷ್ಟ್ರವೊಂದನ್ನು ಮಾತ್ರ ಯಹೂದಿಯರಿಗಾಗಿ ಸ್ಥಾಪನೆ ಮಾಡಿ ಫೆಲೆಸ್ತೀನ್ ಜನರಿಗೆ ಮೋಸ ಮಾಡಿದವು. ಅಮೆರಿಕ ಇಸ್ರೇಲ್‌ಗೆ ಸಕಲ ಬೆಂಬಲವನ್ನೂ ನೀಡಿ ಅಣ್ವಸ್ತ್ರ ಪ್ರಬಲ ರಾಷ್ಟ್ರವನ್ನಾಗಿ ಮಾಡಿತು.

ಆಗಿನಿಂದಲೇ ತಮ್ಮ ತಾಯ್ನಾಡಿನಿಂದ ವಂಚಿತರಾದ, ಫೆಲೆಸ್ತೀನ್ ಅರಬರು ‘ಫೆಲೆಸ್ತೀನ್ ವಿಮೋಚನಾ ಸಂಸ್ಥೆ’ ಎಂಬ ಸಂಘಟನೆಯನ್ನು ಸ್ಥಾಪಿಸಿಕೊಂಡು ಹೋರಾಟ ಮಾಡುತ್ತಾ ಬಂದಿದ್ದಾರೆ. ಇಸ್ರೇಲ್ ಸ್ಥಾಪನೆಯಾದಾಗಿನಿಂದ ನಾನಾ ವಿಧದ ದಬ್ಬಾಳಿಕೆಗೆ ಈಡಾಗಿರುವ ಫೆಲೆಸ್ತೀನಿಯರು ಬಳಲಿ ಬೆಂಡಾಗಿದ್ದಾರೆ. ವಿದೇಶಗಳಿಂದ ವಲಸೆ ಬಂದಿರುವ ಯಹೂದಿಗಳಿಗೆ ಫೆಲೆಸ್ತೀಯರಿಗೆೆ ಸೇರಬೇಕಾಗಿರುವ ಪ್ರದೇಶಗಳಲ್ಲಿ ವಸತಿಗಳನ್ನು ನಿರ್ಮಿಸಲಾಗಿದೆ. ಆಕ್ಲೋ ಒಪ್ಪಂದದ ಪ್ರಕಾರ ಫೆಲೆಸ್ತೀನ್‌ಗೆ ಸ್ವಾಯತ್ತ ಆಡಳಿತ ಎಂಬ ಮಾನ್ಯತೆ ನೀಡಿದ್ದರೂ ಅಲ್ಲಿನ ಜನರ ಸಂಕಟ ನಿವಾರಣೆಯಾಗಿಲ್ಲ. ಫೆಲೆಸ್ತೀನ್ ಅರಬರು ನಿರಂತರವಾಗಿ ಇಸ್ರೇಲ್‌ನ ಅಧೀನದಲ್ಲಿ ಇರಬೇಕಾದ ಪರಿಸ್ಥಿತಿ ಉಂಟಾಗಿದೆ.

ಫೆಲೆಸ್ತೀನ್ ಜನತೆಯ ಸ್ವಯಂ ಆಡಳಿತದ ಹಕ್ಕನ್ನು ಭಾರತ ನೆಹರೂ ಕಾಲದಿಂದಲೂ ಪ್ರತಿಪಾದಿಸುತ್ತಾ, ಈ ಜನ ನಡೆಸಿಕೊಂಡು ಬಂದಿರುವ ಶಾಂತಿಯುತ ಹೋರಾಟವನ್ನು ಬೆಂಬಲಿಸುತ್ತಾ ಬಂದಿದೆ. ಆದರೆ, ಜಾಗತೀಕರಣದ ಬಳಿಕ ವಿಶ್ವದ ವಿದ್ಯಮಾನಗಳಲ್ಲಿ ಹಲವಾರು ಬದಲಾವಣೆಗಳಾದವು. ಈ ಹಂತದಲ್ಲಿ ಫೆಲೆಸ್ತೀನ್ ಚಳವಳಿಗೆ ಹಿನ್ನಡೆಯಾಯಿತು. ಜಗತ್ತಿಗೆಲ್ಲ ಮಾನವ ಹಕ್ಕುಗಳ ಬಗ್ಗೆ ಉಪದೇಶ ನೀಡುವ ಅಮೆರಿಕ ತಮ್ಮ ಮಾತೃಭೂಮಿಯ ಹಕ್ಕಿಗಾಗಿ ಹೋರಾಡುತ್ತಿರುವ ಫೆಲೆಸ್ತೀನ್ ಜನರನ್ನು ಹತ್ತಿಕ್ಕಲು ಇಸ್ರೇಲ್‌ಗೆ ಬೆಂಬಲ ನೀಡುತ್ತಾ ಬಂದಿದೆ. ಇನ್ನೊಂದೆಡೆ ಇರಾಕ್ ಮತ್ತು ಲಿಬಿಯಾಗಳನ್ನು ಕೂಡಾ ಅದು ನಾಶ ಮಾಡಿತ್ತು. ಸದ್ದಾಂ ಹುಸೇನ್ ಮತ್ತು ಕರ್ನಲ್ ಗದ್ದಾಫಿ ಅವರ ಸಾವಿನ ಬಳಿಕ ಈ ಎರಡೂ ದೇಶಗಳು ವಿನಾಶದ ಅಂಚಿಗೆ ಬಂದು ನಿಂತಿವೆ. ಮತ್ತೊಂದೆಡೆ ಫೆಲೆಸ್ತೀನ್ ಜನತೆ ದಿಕ್ಕುದೆಸೆಯಿಲ್ಲದೆ ಹೋರಾಡುತ್ತಲೇ ಇದ್ದಾರೆ. ಈ ಸನ್ನಿವೇಶದಲ್ಲಿ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಮೋದಿ ಸರಕಾರ ಇಸ್ರೇಲ್ ಜೊತೆಗೆ ಸಂಬಂಧ ಬೆಳೆಸಿಕೊಂಡು ಮುಂಚಿನಿಂದ ಅನುಸರಿಸಿಕೊಂಡು ಬಂದ ವಿದೇಶಾಂಗ ನೀತಿಗೆ ದ್ರೋಹ ಬಗೆದಿದೆ. ಇಸ್ರೇಲ್ ಜೊತೆಗೆ ಸಂಬಂಧ ಬೆಳೆಸಿಕೊಳ್ಳುವ ಮತ್ತು ಇಸ್ರೇಲ್ ಪ್ರಧಾನಿಯನ್ನು ಸ್ವಾಗತಿಸುವ ಮುನ್ನ ಪ್ರಧಾನಮಂತ್ರಿ ಮೋದಿ ಸರ್ವಪಕ್ಷ ಸಭೆ ಕರೆದು ಸಮಾಲೋಚಿಸಬೇಕಾಗಿತ್ತು. ಆದರೆ, ಇದಾವುದನ್ನೂ ಮಾಡದೆ ಅವರು ಕೈಗೊಂಡ ತೀರ್ಮಾನ ಖಂಡನೀಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News