ಮಡಿಕೇರಿ: ಜ.19 ರಿಂದ ರಾಜ್ಯ ಮಟ್ಟದ ಪ್ರತಿಭೋತ್ಸವ

Update: 2018-01-18 10:58 GMT

ಮಡಿಕೇರಿ, ಜ.18: ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ ವತಿಯಿಂದ ಎರಡು ವರ್ಷಗಳಿಗೊಮ್ಮೆ ನಡೆಯುವ ರಾಜ್ಯ ಮಟ್ಟದ ಪ್ರತಿಭೋತ್ಸವ ಈ ಬಾರಿ ಜ.19ರಿಂದ ಜ.21 ರವರೆಗೆ ನಾಪೋಕ್ಲು ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‍ಎಸ್‍ಎಫ್ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫಿಯಾನ್ ಸಖಾಫಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಜ.19 ರಂದು ಮಧ್ಯಾಹ್ನ 2 ಗಂಟೆಗೆ ಕೊಡಗು ಜಿಲ್ಲಾ ಉಪ ಖಾಝಿ ಮಹ್ಮೂದ್ ಮುಸ್ಲಿಯಾರ್ ಎಡಪಾಲ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರತಿಭೋತ್ಸವಕ್ಕೆ ಚಾಲನೆ ದೊರೆಯಲಿದೆ ಎಂದರು.

ಅಂದು ಸಂಜೆ 6.30 ಕ್ಕೆ ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಅವರ ಅಧ್ಯಕ್ಷತೆಯಲ್ಲಿ ಅಧ್ಯಾತ್ಮಿಕ ಮಜ್ಲಿಸ್ ನಡೆಯಲಿದ್ದು, ಪ್ರಮುಖರಾದ ಸಯ್ಯಿದ್ ಜಲಾಲುದ್ದೀನ್, ಸಯ್ಯಿದ್ ಶಿಹಾಬುದ್ದೀನ್, ಸಯ್ಯಿದ್ ಇಲ್ಯಾಸ್ ಎಮ್ಮೆಮಾಡು, ಸಯ್ಯಿದ್ ಉಮರ್ ಅಸ್ಸಖಾಫ್, ಸಯ್ಯಿದ್ ಹಾಮೀಂ ಶಿಹಾಬ್ ತಂಙಳ್ ಚಿಕ್ಕಮಗಳೂರು, ಸಯ್ಯಿದ್ ಖಾತಿಂ ಅಲ್ ಹೈದ್ರೋಸಿ ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜ್ಯದ 18 ಜಿಲ್ಲೆಗಳಿಂದ ಸುಮಾರು 3 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದು, 96 ಸ್ಪರ್ಧೆಗಳು ನಡೆಯಲಿವೆ. ಜೂನಿಯರ್, ಸೀನಿಯರ್, ಜನರಲ್, ಕ್ಯಾಂಪಸ್ ಜೂನಿಯರ್, ಕ್ಯಾಂಪಸ್ ಸೀನಿಯರ್ ಸೇರಿದಂತೆ ಒಟ್ಟು ಏಳು ವಿಭಾಗಗಳಲ್ಲಿ ಹತ್ತು ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯಲಿವೆ ಎಂದು ಸುಫಿಯಾನ್ ಸಖಾಫಿ ತಿಳಿಸಿದರು.

ಜನವರಿ 21 ರಂದು ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಎಸ್‍ವೈಎಸ್ ರಾಜ್ಯಾಧ್ಯಕ್ಷರಾದ ಜಿ.ಎಂ. ಮೊಹಮ್ಮದ್ ಕಾಮಿಲ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಹಲವು ಮಂದಿ ಉಲಮಾ ಉಮರಾಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ರಾಜಕೀಯ ನಾಯಕರುಗಳು ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.

ಈ ಬೃಹತ್ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಸರ್ಕಾರ ಸಹಕಾರ ನೀಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಸುದ್ದಿಗೋಷ್ಠಿಯಲ್ಲಿ ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಜಿಲ್ಲಾಧ್ಯಕ್ಷರಾದ ಹಫೀಳ್ ಸಅದಿ ಕೊಂಡಂಗೇರಿ, ಕ್ಯಾಂಪಸ್ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಹಾಗೂ ಸ್ವಾಗತ ಸಮಿತಿ ಸಂಚಾಲಕ ಹಮೀದ್ ಮುಸ್ಲಿಯಾರ್ ಕೊಳಕೇರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News