ಚಿಕ್ಕಮಗಳೂರು: ಗೋವಾ ನೀರಾವರಿ ಸಚಿವರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2018-01-18 11:15 GMT

ಚಿಕ್ಕಮಗಳೂರು, ಜ.18:  ಗೋವಾದ ನೀರಾವರಿ ಸಚಿವ ವಿನೋದ್ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೇಸ್ ಕಾರ್ಮಿಕ ವಿಭಾಗದ ಕಾರ್ಯಕರ್ತರು ನಗರದಲ್ಲಿ ಗುರುವಾರ ತೀವ್ರ ಪ್ರತಿಭಟನೆ ನಡೆಸಿದರು.

ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್‍ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಅವರ ನೇತೃತ್ವದಲ್ಲಿ ಆಜಾದ್ ಪಾರ್ಕ್ ವೃತ್ತದ ಬಳಿ ಅಣುಕು ಶವ ಯಾತ್ರೆ, ಪ್ರತಿಕೃತಿ ದಹನ ನಡೆಸಿದ ಕಾರ್ಯಕರ್ತರು ಪ್ರತಿಕೃತಿಗೆ ಧರ್ಮದೇಟು ನೀಡುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಗೋವಾ ಸಚಿವ ವಿನೋದ್ ಪಾಲೇಕರ್ ಅವರು ಕನ್ನಡಿಗರ ಬಗ್ಗೆ ಹರಾಮಿ ಪದ ಬಳಸಿರುವುದು ಅವರ ಲಜ್ಜೆಗೆಟ್ಟ, ನೀತಿಗೆಟ್ಟ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಸಚಿವ ಪಾಲೇಕರ್ ಅವರು ಕೂಡಲೇ ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಕಿಸಾನ್ ಖೇತ್ ಮಜ್ದೂರ್ ಕಾಂಗ್ರೇಸ್‍ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ, ಕನ್ನಡಿಗರ ಬಗ್ಗೆ ಅಸಾಂವಿಧಾನಿಕ ಪದ ಬಳಸಿರುವ ಸಚಿವ ಪಾಲೇಕರ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಇಲ್ಲದಿದ್ದಲ್ಲಿ ಅವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಒತ್ತಾಯಿಸಿದರು.

ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಂಚಾಲಕ ಬಿ.ಎಂ.ಸಂದೀಪ್ ಮಾತನಾಡಿ ಸಣ್ಣಸಣ್ಣ ವಿಷಯಕ್ಕೂ ಬೀದಿಗಿಳಿಯುತ್ತಿದ್ದ ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡ ಪರ ಸಂಘಟನೆಗಳು ಈ ವಿಷಯದಲ್ಲಿ ಮೌನ ತಾಳಿರುವುದು ಅನೇಕ ಅನುಮಾನಕ್ಕೆ ಎಡೆಮಾಡಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ನಯಾಜ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಾದಾಬ್ ಆಲಂಖಾನ್, ಜಿಲ್ಲಾ ಯುವ ಕಾಂಗ್ರೇಸ್ ಉಪಾಧ್ಯಕ್ಷ ಜೆ.ವಿನಾಯಕ, ಪ್ರಧಾನ ಕಾರ್ಯದರ್ಶಿ ಸಿ.ಸಿ.ಮಧು, ರುಕ್ಸಾನಾ ಬೇಗಂ, ಫಾತಿಮಾ, ಅಂಜುಮನ್ ಇಸ್ಲಾಮಿಯ ಸಂಘಟನೆಯ ಅಧ್ಯಕ್ಷ ನಜೀರ್ ಅಹಮದ್, ಮುಖಂಡ ನಾಸೀರ್ ಅಹಮದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News