ಶಿವಮೊಗ್ಗ,: ಕೆರೆಗಳ ಸಂರಕ್ಷಣೆಗೆ ಜಿಲ್ಲಾಡಳಿತ ವಿಫಲ; ಡಿ.ಸಿ. ಕಚೇರಿ ಆವರಣದಲ್ಲಿ ಧರಣಿ
ಶಿವಮೊಗ್ಗ, ಜ. 18: ಕೆರೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡುವಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಅಣ್ಣಾ ಹಜಾರೆ ಹೋರಾಟ ಸಮಿತಿಯು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿತು.
ಅಧಿಕಾರಿಗಳು ನೀಡುವ ಮಾಹಿತಿಯನುಸಾರ ಜಿಲ್ಲೆಯಲ್ಲಿ 6503 ಕೆರೆಗಳಿವೆ. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 109 ಕೆರೆಗಳಿದ್ದು, ಇದರಲ್ಲಿ ಪ್ರಸ್ತುತ 77 ಕೆರೆಗಳು ಮಾತ್ರ ಅಸ್ತಿತ್ವದಲ್ಲಿವೆ. ಉಳಿದ 32 ಕೆರೆಗಳು ಬೇರೆ ಬೇರೆ ಉದ್ದೇಶಗಳಿಗೆ ಮಂಜೂರು ಮಾಡಲಾಗಿದೆ. ಆದರೆ ಕೆರೆ ಜಾಗವನ್ನು ಅವ್ಯಾಹತವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದ ಹಲವು ಕೆರೆಗಳು ಅಸ್ತಿತ್ವ ಕಳೆದುಕೊಂಡಿವೆ. ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸಮಿತಿಯು ನಿರಂತರವಾಗಿ ಪ್ರತಿಭಟನೆ ನಡೆಸಿಕೊಂಡು ಬಂದಿತ್ತು. ಈ ಹಿಂದಿನ ಜಿಲ್ಲಾಧಿಕಾರಿಗಳು ಒತ್ತುವರಿ ತೆರವಿಗೆ ಕ್ರಮಕೈಗೊಂಡಿದ್ದರು. ಆದರೆ ಇದೀಗ ಕೆರೆ ಸಂರಕ್ಷಣೆ ವಿಷಯ ಸಂಪೂರ್ಣ ನೆನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ತಿಂಗಳುಗಳ ಹಿಂದೆ ಹಾಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಕೆರೆ ಸಂರಕ್ಷಣೆಗೆ ಕ್ರಮಕೈಗೊಳ್ಳುವಂತೆ ಸಮಿತಿ ಮನವಿ ಮಾಡಿದ ವೇಳೆ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಇದೀಗ ಕೆರೆ ಸಂರಕ್ಷಣೆ ನಿಟ್ಟಿನಲ್ಲಿ ಜಿಲ್ಲಾಡಳಿತ ಸೂಕ್ತ ಕ್ರಮ ಜರುಗಿಸಿಲ್ಲ. ಸಂಬಂಧಿಸಿದ ಸಮಿತಿಯ ಸಭೆಯೂ ಕೂಡ ನಡೆಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಕೆರೆ ಸಂರಕ್ಷಣೆಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯವು ಹಲವು ಸಲಹೆಗಳನ್ನು ನೀಡಿದೆ. ಕೆರೆ ಒತ್ತುವರಿ ಪ್ರದೇಶ ಗುರುತಿಸಿ ತೆರವುಗೊಳಿಸುವುದು, ಕೊಳಚೆ ನೀರು ಸೇರ್ಪಡೆಯಾಗದಂತೆ ಎಚ್ಚರವಹಿಸುವುದು, ಕೆರೆ ಜಾಗದ 30 ಮೀಟರ್ ಅಂತರದಲ್ಲಿ ಯಾವುದೇ ರೀತಿಯ ಖಾಸಗಿ ಅಥವಾ ಸರ್ಕಾರಿ ಕೆಲಸ ಕಾರ್ಯಗಳಿಗೆ ಆಸ್ಪದ ನೀಡಬಾರದು, ಹೂಳು ತೆಗೆಯುವುದು ಸೇರಿದಂತೆ ಕೆರೆ ಸಂರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿದೆ.
ಇದೆಲ್ಲದರ ಹೊರತಾಗಿಯೂ ಶಿವಮೊಗ್ಗದಲ್ಲಿ ಕೆರೆಗಳ ಸಂರಕ್ಷಣೆ ಸಾಧ್ಯವಾಗುತ್ತಿಲ್ಲ. ಒತ್ತುವರಿ ತೆರವುಗೊಳಿಸಲು ಮುಂದಾಗುತ್ತಿಲ್ಲ. ತಕ್ಷಣವೇ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಯ ವತಿಯಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಅಶೋಕ್ ಯಾದವ್, ಬಿ.ಜನಮೇಜಿರಾವ್, ಬಾಬುರಾವ್, ಪರಿಸರ ರಮೇಶ್ ಮೊದಲಾದವರಿದ್ದರು.