ದಾವಣಗೆರೆ: ಜಿಲ್ಲಾಧಿಕಾರಿಯಿಂದ ಮತಗಟ್ಟೆಗಳ ಪರಿಶೀಲನೆ

Update: 2018-01-18 13:00 GMT

ದಾವಣಗೆರೆ,ಜ.18: ಮತದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೊಬೈಲ್ ಅ್ಯಪ್‍ವೊಂದನ್ನು ಸಿದ್ಧಪಡಿಸಿದ್ದು, ಇದರ ಮೂಲಕ ಮತದಾರರು ತಮ್ಮ ಗುರುತಿನ ಚೀಟಿಯ ಹೆಸರು ತಿದ್ದುಪಡಿ, ಸೇರ್ಪಡೆ, ವರ್ಗಾವಣೆ ಮತ್ತಿತರ ಕುರಿತ ಸಂಪೂರ್ಣ ಮಾಹಿತಿ ತಿಳಿಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ತಿಳಿಸಿದರು.

ವಿಧಾನಸಭಾ ಚುನಾವಣೆ ನಿಮಿತ್ತ ನಗರದ 8ನೇ ವಾರ್ಡ್‍ನ ಎಸ್‍ಪಿಎಸ್ ನಗರದಲ್ಲಿ ಮತಗಟ್ಟೆಗಳ ಪರಿಶೀಲನೆ ನಡೆಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹೆಸರು ತಿದ್ದುಪಡಿ, ವರ್ಗಾವಣೆ, ನಿಧನ ಹೊಂದಿದವರ ಹೆಸರು ತೆಗೆಸುವುದು, ಹೆಸರು ಕೈತಪ್ಪಿರುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಈ ಅ್ಯಪ್ ಮೂಲಕ ಮಾಹಿತಿ ತಿಳಿಯಬಹುದು. ಅದಕ್ಕಾಗಿ ಕೆಎಎಫಿಕ್ (KAEPIC) ಎಂದು ಟೈಪ್ ಮಾಡಿ ಸ್ಪೆಸ್ ಬಿಟ್ಟು ನಿಮ್ಮ ಗುರುತಿನ ಚೀಟಿ ನಂಬರ್ ನಮೂದಿಸಿ 9731979899 ನಂಬರ್‍ಗೆ ಎಸ್‍ಎಂಎಸ್ ಮಾಡಿದರೆ ಸಂಪೂರ್ಣ ಮಾಹಿತಿ ದೊರೆಯುತ್ತದೆ ಎಂದ ಅವರು, ಗುರುತಿನ ಚೀಟಿ ಸಂಬಂಧಿತ ಆಕ್ಷೇಪಣೆಗೆ ಜ. 12ರ ವರೆಗೆ ನೀಡಿದ್ದ ಅವಧಿಯನ್ನು ಜ. 22ರ ವರೆಗೆ ವಿಸ್ತರಿಸಿದ್ದು, ಮತದಾರರು ತಮ್ಮ ಹೆಸರು ಬಿಟ್ಟು ಹೋದಲ್ಲಿ, ವರ್ಗಾವಣೆಯಾದಲ್ಲಿ ಮತ್ತಿತರ ಆಕ್ಷೇಪಣೆಗಳಿದ್ದರೆ ಶೀಘ್ರ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದೆಂದರು.

ಯಾವುದೇ ಕಾರಣಕ್ಕೂ 18 ವರ್ಷ ತುಂಬಿದ ಯಾವೊಬ್ಬರು ಮತದಾನದಿಂದ ಹೊರಗುಳಿಯಬಾರದು. ಈ ಕುರಿತು ಸಾರ್ವಜನಿಕರಿಗೆ ಮಾಹಿತಿ, ಅರಿವು ನೀಡಲು ಬೂತ್‍ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಪರಿಶೀಲನೆ ನಡೆಸುವ ಮೂಲಕ ಪರಿಶುದ್ಧತೆ ಕಾಪಾಡುವ ಕಾರ್ಯ ಮಾಡಲಿದ್ದಾರೆ ಎಂದರು.

ಮತದಾರರು ಮತ ಚಲಾವಣೆ ಮಾಡಿದ ಸಂದರ್ಭ ತಾವು ಚಲಾವಣೆ ಮಾಡಿದ ವ್ಯಕ್ತಿಗೆ ಮತ ಚಲಾವಣೆಯಾಗಿದೆ ಎಂಬುದನ್ನು ಮತದಾರ ಅರಿಯುವ ನಿಟ್ಟಿನಲ್ಲಿ 230 ವಿವಿ ಪ್ಯಾಡ್ ತರಿಸಲಾಗಿದೆ. ಇದು ಮತದಾರ ಮತದಾನ ಮಾಡಿದ ತಕ್ಷಣವೇ ತಾವು ಇಂತಹವರಿಗೆ ಮತದಾನ ಮಾಡಿದ್ದೀರಿ ಎಂಬುದನ್ನು ಪರದೆ ಮೇಲೆ ಸುಮಾರು 7 ಸೆಕೆಂಡ್‍ಗಳ ಕಾಲ ತೋರಿಸುತ್ತದೆ. ಇದರಿಂದ ಮತಗಟ್ಟೆ, ಮತಯಂತ್ರದಲ್ಲಿ ದೋಷ ಅಥವಾ ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಎಸ್‍ಪಿಎಸ್ ನಗರದಲ್ಲಿ ಅನೇಕ ಮತದಾರರು ಬೇರೆಡೆ ಹೋಗಿದ್ದಾರೆ. ಅದೇರೀತಿ ಬೇರೆಡೆಯಿಂದ ಅನೇಕರು ಈ ಭಾಗಕ್ಕೆ ಬಂದಿದ್ದಾರೆ. ಆದರೆ, ಇವರ ಮತಗಳು ಮಾತ್ರ ಮೊದಲಿದ್ದ ಭೂತ್‍ನಲ್ಲಿಯೇ ಇವೆ. ಆದ್ದರಿಂದ ಶೀಘ್ರವೇ ಈ ಕುರಿತು ಅರ್ಜಿ ನೀಡಿ ತಾವಿರುವ ಬೂತ್‍ನಲ್ಲಿಯೇ ಮತದಾನ ಮಾಡುವ ಅವಕಾಶ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು. 

ಪಾಲಿಕೆ ಉಪಆಯುಕ್ತ ರವೀಂದ್ರ ಮಲ್ಲಾಪುರ, 8ನೇ ವಾರ್ಡ್ ಸದಸ್ಯ ಗೋಣೆಪ್ಪ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News