ದಾವಣಗೆರೆ: ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಧರಣಿ

Update: 2018-01-18 13:04 GMT

ದಾವಣಗೆರೆ,ಜ.18: ಟೊಮ್ಯಾಟೋ ಖರೀದಿ ಕೇಂದ್ರ ಪ್ರಾರಂಭಕ್ಕೆ ಒತ್ತಾಯಿಸಿ ಹಾಗೂ ಬೆಲೆ ಕುಸಿತ ಖಂಡಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ಜಿಲ್ಲೆಯ ರೈತರು ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗದಲ್ಲಿ ಟೊಮ್ಯಾಟೋಗಳನ್ನು ಸುರಿದು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ ಟೊಮ್ಯೊಟೋ ಉತ್ಪಾದನೆ ಹೆಚ್ಚಾಗಿರುವುದರಿಂದ ಬೆಲೆ ಕುಸಿತವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ನಷ್ಟವಾಗುತ್ತಿದೆ. ಪ್ರತಿ ವರ್ಷವೂ ಟೊಮ್ಯೊಟೋ ಬೆಲೆ ಕುಸಿತ ಕಂಡಾಗ ಖರೀದಿ ಕೇಂದ್ರ ಪ್ರಾರಂಭಿಸಬೇಕೆಂದು ರೈತರು ಮನವಿ ಮಾಡುತ್ತೀದ್ದೇವೆ. ಆದರೆ, ನಮ್ಮ ಪ್ರಯತ್ನ ವ್ಯರ್ಥವಾಗಿದೆ. ಜಿಲ್ಲಾಡಳಿತ ಟೊಮ್ಯೊಟೋ ಬೆಲೆ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುತ್ತಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು.

ಸರ್ಕಾರದ ಪ್ರತಿ ಬಜೆಟ್‍ನಲ್ಲಿ ದಾವಣಗೆರೆಗೆ ಶೀತಲೀಕರಣ ಕೇಂದ್ರ ಮಂಜೂರು ಮಾಡಬೇಕೆಂದು ಒತ್ತಾಯಿಸುತ್ತಿದ್ದೇವೆ. ಆದರೆ, ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಆದ್ದರಿಂದ ಈ ಬಾರಿಯ ಬಜೆಟ್‍ನಲ್ಲಿ ದಾವಣಗೆರೆಗೆ ಶೀತಲೀಕರಣ ಕೇಂದ್ರ ಮಂಜೂರು ಮಾಡಬೇಕು. ಇದರಿಂದ ತರಕಾರಿ ಬೆಳೆಗಳನ್ನು ಸಂರಕ್ಷಿಸಿಕೊಳ್ಳಲು ಸಹಕಾರಿಯಾಗುತ್ತದೆ ಹಾಗೂ ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ ಎಂದು ಅವರು ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗುಮ್ಮನೂರು ಬಸವರಾಜ್, ಪರಶುರಾಮ್, ನಾಗರಾಜ್, ಪ್ರಕಾಶ್, ರವಿ, ಕೋಲ್ಕುಂಟೆ ಬಸಣ್ಣ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News