ರಸ್ತೆ ಅಪಘಾತ: ಮೂವರಿಗೆ ಗಂಭೀರ ಗಾಯ
Update: 2018-01-18 19:33 IST
ಬಣಕಲ್, ಜ.18: ಹೊರನಾಡಿನಿಂದ ಮದುಗಿರಿಗೆ ಹೋಗುತ್ತಿದ್ದ ವ್ಯಾನ್ ಮತ್ತು ಕೊಪ್ಪಳದಿಂದ ಹೊರನಾಡು ತೆರಳುತ್ತಿದ್ದ ಇಂಡಿಕಾ ಕಾರಿನ ನಡುವೆ ಜಾವಳಿ ಸಮೀಪ ಢಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು ಗಾಯಾಳುಗಳಿಗೆ ಜಾವಳಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದಿಂದಾಗಿ ಕೆಲ ಕಾಲ ಸಂಚಾರ ಸ್ಥಗಿತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ಸ್ಥಳಕ್ಕೆ ಬಾಳೂರು ಠಾಣೆ ಪೋಲಿಸರು ಆಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‍ಐ ಮಂಜಯ್ಯ, ಎಎಸ್‍ಐ ಹನುಮಂತಪ್ಪ, ಸಿಬ್ಬಂದಿಗಳಾದ ಬಾಬು, ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.