ಸುಳ್ಳು ಸುದ್ದಿ ಹರಡಿದ ಆರೋಪ: ಶಾಸಕ ಸಿ.ಟಿ.ರವಿ ಮೇಲೆ ಕ್ರಮಕ್ಕೆ ಒತ್ತಾಯಿಸಿ ದೂರು
ಚಿಕ್ಕಮಗಳೂರು, ಜ.18: ಚಿಕ್ಕಮಗಳೂರು ಶಾಸಕ ಸಿ.ಟಿ.ರವಿಯವರು ಸಾಮಾಜಿಕ ಜಾಲತಾಣ ಟ್ವೀಟರ್ ಮೂಲಕ ಸುಳ್ಳು ಹಾಗೂ ಸಮಾಜದ ಅಶಾಂತಿಗೆ ಕಾರಣವಾಗುವಂತಹ ಸುದ್ದಿಗಳನ್ನು ಹರಿದಾಡುವಂತೆ ಮಾಡಿ ಜನರ ಶಾಂತಿ ನೆಮ್ಮದಿಗೆ ಭಂಗ ತರುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಿ.ಎಂ.ಸಂದೀಪ್ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳಿಗೆ ದೂರು ನೀಡಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ.
ಇಂದು ಅವರು ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಜಗದೀಶ್‍ರವರಿಗೆ ಶಾಸಕ ಸಿ.ಟಿ.ರವಿ ಅವರ ಮೇಲೆ 8 ಗುರುತರವಾದ ಆರೋಪಗಳ ಲಿಖಿತ ದೂರನ್ನು ಸಲ್ಲಿಸಿದರು. ಸಿ.ಟಿ.ರವಿಯವರು ಮಾಜಿ ಮಂತ್ರಿಯೂ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ಅವರು ತಮ್ಮ ಟ್ವೀಟರ್ ಅಕೌಂಟ್‍ನಲ್ಲಿ ಹಾಗೂ ಭಾಷಣಗಳ ಮೂಲಕ ಮತೀಯ ದ್ವೇಷ ಮತ್ತು ಹಗೆಯನ್ನು ಹುಟ್ಟಿಸುವಂತಹ ಹೇಳಿಕೆಗಳನ್ನು ಕೊಡುವ ಮೂಲಕ ಕರ್ನಾಟಕದ ಶಾಂತಿಪ್ರಿಯ ಜನರಲ್ಲಿ ಅಶಾಂತಿ ಉಂಟುಮಾಡುತ್ತಿದ್ದಾರೆ. ಈ ಕೆಳಗಿನ ಅವರ ಕೆಲವು ಹೇಳಿಕೆಗಳು ನಮ್ಮ ಆರೋಪಕ್ಕೆ ಪೂರಕವಾಗಿರುತ್ತವೆ. ಅವುಗಳನ್ನು ಈ ದೂರಿನಲ್ಲಿ ದಾಖಲಿಸಿದ್ದು ಕೂಡಲೇ ಕಾನೂನಿನ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
2017ರ ಆ.18ರಂದು ನಡೆದ ನಡೆದ ಪ್ರವೀಣ್ ಪೂಜಾರಿ ಕೊಲೆ, 2017ರ ಅ.22ರಂದು ನಡೆದ ಕಾರ್ತಿಕ್ ರಾಜ್ ಕೊಲೆ, ಮೈಸೂರಿನ ಮಾಗಳ ರವಿ ಕೊಲೆ, ಮಡಿಕೇರಿಯ ರಾಜು ಕನ್ನಡಬಾನೆ ಮೃತ್ಯು, ಯೋಗೇಶ್ ಗೌಡ, ಕಿತ್ತಗಾನಹಳ್ಳಿ ವಾಸು ಕೊಲೆ, 2014ರ ನ.12ರಂದು ನಡೆದ ಹರೀಶ್ ಬಂಟ್ವಾಳ ಕೊಲೆ ಸೇರಿದಂತೆ ವಿವಿಧ ವಿಷಯಗಳಲ್ಲಿ ಸಿ.ಟಿ.ರವಿಯವರು ಆಕ್ಷೇಪಾರ್ಹ ರೀತಿಯಲ್ಲಿ ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಧರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್ ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್ ವಿಜಯ ಕುಮಾರ್, ಪಕ್ಷದ ವಕ್ತಾರ ಎಂ.ಸಿ ಶಿವಾನಂದಸ್ವಾಮಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ದಂಟರಮಕ್ಕಿ ಚಂದ್ರೇಗೌಡ, ಕಾಂಗ್ರೆಸ್ ಮುಖಂಡರುಗಳಾದ ಹಿರೆಮಗಳೂರು ರಾಮಚಂದ್ರ, ಸಿಲ್ವರ್ ಸ್ಟರ್, ಕಾರ್ತಿಕ್ ಚೆಟ್ಟಿಯಾರ್, ಹೊನ್ನೇಶ್ ಹಾಗೂ ನಗರ ಸಭಾ ಸದಸ್ಯ ರೂಬೆನ್ ಮೋಸಸ್ ಹಾಜರಿದ್ದರು.