ವಿಧಾನಸಭಾ ಚುನಾವಣೆಗೆ ಎಐಎಂಐಎಂ ನಿಂದ 60 ಅಭ್ಯರ್ಥಿಗಳು ಕಣಕ್ಕೆ

Update: 2018-01-18 17:00 GMT

ತುಮಕೂರು,ಜ.18:ಅಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷದ ವತಿಯಿಂದ ಈ ವರ್ಷ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 60 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಾಗಿ ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗನಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜೈಭೀಮ್ ಮತ್ತು ಜೈ ಎಂಐಎ ಎಂಬ ಘೋಷಣೆಯೊಂದಿಗೆ ಕಳೆದ 59 ವರ್ಷಗಳಿಂದ ದೇಶದಲ್ಲಿರುವ ಎಐಎಂಐಎಂ ಪಕ್ಷವನ್ನು ಕೆಲವರು ಹೊಸ ಪಕ್ಷ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ದಕ್ಷಿಣ ಭಾರತದ ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ಚುನಾಯಿತ ಸದಸ್ಯರಿದ್ದಾರೆ. ಪ್ರಸ್ತುತ ಓರ್ವ ಸಂಸದರು, 7 ಜನ ಶಾಸಕರು,2 ವಿಧಾನಪರಿಷತ್ ಸದಸ್ಯರು ಸ್ಭೆರಿದಂತೆ ಹಲವರು ಪಕ್ಷದ ಚಿಹ್ನೆಯ ಮೇಲೆ ಜನಪ್ರತಿನಿಧಿಗಳಾಗಿ ಆಯ್ಕೆಯಾಗಿದ್ದಾರೆ. ಶರಿಅತ್ ಕಾನೂನುಗಳ ರಕ್ಷಣೆ ಹಾಗೂ ಡಾ.ಬಿ,ಆರ್. ಅಂಬೇಡ್ಕರ್ ಬರೆದ ಸಂವಿಧಾನದ ರಕ್ಷಣೆ ನಮ್ಮ ಪಕ್ಷದ ಎರಡು ಪ್ರಮುಖ ಉದ್ದೇಶಗಳಾಗಿವೆ ಎಂದರು.

ಕರ್ನಾಟಕ ರಾಜ್ಯದಲ್ಲಿ 2018ರ ಮೇ ತಿಂಗಳಿನಲ್ಲಿ ನಡೆಯುಬಹುದಾದ ವಿಧಾನಸಭಾ ಚುನಾವಣೆಯಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ್ಳ ಜಿಲ್ಲೆಗಳಲ್ಲಿ ತಲಾ ಕ್ಷೇತ್ರಗಳಲ್ಲಿ, ಬಿಜಾಪುರ, ಭಾಗಲಕೋಟೆ ಜಿಲ್ಲೆಗಳ ಎಲ್ಲಾ ಕ್ಷೇತ್ರಗಳು ಹಾಗೂ ಬೆಂಗಳೂರು ನಗರ,ಗ್ರಾಮಾಂತರ, ತುಮಕೂರು ಜಿಲ್ಲೆಗಳ ಕೆಲ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್,ತುಮಕೂರು ನಗರ,ತಿಪಟೂರು ಮತ್ತು ಕೊರಟಗೆರೆ ಕ್ಷೇತ್ರಗಳಲ್ಲಿ ಎಐಎಂಐಎಂನ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ.ಈಗಾಗಲೇ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುವವರ ಪಟ್ಟಿ ಅಂತಿಮ ವಾಗಿದ್ದು,ಈ ಭಾಗದ ಪಟ್ಟಿಯನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡಲಾಗುವುದು ಎಂದು ಉಸ್ಮಾನ ಗನಿ ತಿಳಿಸಿದರು.

ರಾಜ್ಯಕ್ಕೆ ಎಐಎಂಐಎಂ ಪ್ರವೇಶಿಸಿದರ ಸಂಕೇತವಾಗಿ ಇದೇ 21 ರಂದು ಬಿಜಾಪುರದಲ್ಲಿ ಪಕ್ಷದ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.ಈ ಕಾರ್ಯಕ್ರಮಕ್ಕೆ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಓವೈಸಿ ಅವರು ಬರಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಲಿದ್ದಾರೆ ಎಂದರು.

ಹಜ್‍ ಯಾತ್ರಿಕರಿಗೆ ನೀಡುತ್ತಿದ್ದ ಸಬ್ಸಿಡಿ ಹಣ ಕಡಿತ ಮಾಡಿರುವ ರೀತಿಯೇ, ಅಮರನಾಥ ಯಾತ್ರೆ ಸೇರಿದಂತೆ ಹಿಂದುಗಳ ಪವಿತ್ರ ಕ್ಷೇತ್ರಗಳ ಯಾತ್ರೆಗೆ, ಅವುಗಳ ಅಭಿವೃದ್ದಿಗೆ ನೀಡುತ್ತಿರುವ ಹಣವನ್ನು ಸಹ ರದ್ದು ಮಾಡಲಿ ಎಂಬುದು ನಮ್ಮ ಪಕ್ಷದ ನಿಲುವಾಗಿದೆ. ಅಲ್ಲದೆ ಗೋ ಹತ್ಯೆ ನಿಷೇಧದ ಹೆಸರಿನಲ್ಲಿ ಒಬ್ಬರ ಆಹಾರದ ಹಕ್ಕನ್ನು ಕಸಿಯುವುದು ತರವಲ್ಲ. ಮೀನು ಹಿಡಿದೇ ಬದುಕುವ ಜನರಿಗೆ ಮೀನು ತಿನ್ನಬೇಡಿ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು,ಇಡೀ ದೇಶದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತನ್ನಿ. ಸಂತೋಷ. ಆದರೆ ಹೊರದೇಶಗಳಿಗೆ ಗೋ ಮಾಂಸ ರಪ್ತಿನಲ್ಲಿ ನಂಬರ್ ಒನ್ ದೇಶವಾಗಿ, ದೇಶದ ಜನರಿಗೆ ತಿನ್ನಬೇಡಿ ಎಂಬುವುದು ಇಬ್ಬಗೆಯ ನೀತಿಯಲ್ಲವೇ ಎಂದು ಉಸ್ಮಾನ್ ಗನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷ ಮೈಸೂರು ಜಿಲ್ಲಾಧ್ಯಕ್ಷ ನದೀಲ್ ಮೊಹಮದ್,ತುಮಕೂರು ಜಿಲ್ಲಾಧ್ಯಕ್ಷ ಜಬೇರ್‍ವುಲ್ಲಾ ಖಾನ್,ಸಲೀಂ ಪಠಾಣ್,ರಫತ್‍ವುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News