ಕ.ಸಾ.ಪ. ಮನವಿ ಪರಿಶೀಲನೆ: ಇಕ್ಬಾಲ್ ಅನ್ಸಾರಿ

Update: 2018-01-18 17:05 GMT

ಗಂಗಾವತಿ,ಜ.18 : ಕನ್ನಡ ನಾಡ-ನುಡಿ ಸೇವೆಗೆ ಸದಾ ಸಿದ್ಧ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕವು 6 ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲು ಸಲ್ಲಿಸಿದ ಮನವಿಯನ್ನು ಸ್ವೀಕರಿಸಲಾಗಿದ್ದು, ಪರಿಶೀಲಿಸಲಾಗುತ್ತದೆ. ಸಮ್ಮೇಳನ ನಡೆಯುವ ಸ್ಥಳ, ಅಂದಾಜು ವೆಚ್ಚ, ರೂಪು-ರೇಷೆಯ ಕುರಿತು ಮಾಹಿತಿ ಸಲ್ಲಿಸುವಂತೆ ಕ.ಸಾ.ಪ. ತಾಲೂಕು ಘಟಕಕ್ಕೆ ಸೂಚಿಸಲಾಗಿದ್ದು, ಆದಷ್ಟು ಬೇಗನೆ ಸಮ್ಮೇಳನ ನಡೆಸುವ ಕುರಿತು ನಿರ್ಧರಿಸಲಾಗುತ್ತದೆ ಎಂದು ಗಂಗಾವತಿ ಕ್ಷೇತ್ರದ ಶಾಸಕರಾದ ಶ್ರೀ ಇಕ್ಬಾಲ್ ಅನ್ಸಾರಿ ಇವರು ತಿಳಿಸಿದರು. 

ಅವರು ನಗರದ ತಮ್ಮ ಗೃಹ ಕಛೇರಿಯಲ್ಲಿ ಬುಧವಾರ ಕ.ಸಾ.ಪ. ತಾಲೂಕ ಘಟಕದ ಪದಾಧಿಕಾರಿಗಳು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡುತ್ತಿದ್ದರು. 
ತಾಲೂಕ ಅಧ್ಯಕ್ಷ ಎಸ್.ಬಿ. ಗೊಂಡಬಾಳ ಇವರು ಮಾತನಾಡುತ್ತಾ, ತಾಲೂಕು ಘಟಕವು ಈಗಾಗಲೇ 5 ಸಮ್ಮೇಳನಗಳನ್ನು ನಡೆಸಿದ್ದು ಕಳೆದ ಬಾರಿ 5ನೇ ಸಮ್ಮೇಳನವು ನವಲಿ ಗ್ರಾಮದಲ್ಲಿ ಸಂಭ್ರಮದಿಂದ ನಡೆಸಲಾಯಿತು. ಈ ಬಾರಿಯೂ ಸಹ 6ನೇ ಸಮ್ಮೇಳನ ಯಶಸ್ವಿಯಾಗಿ ನೆರವೇರಿಸಿಕೊಡಬೇಕೆಂದು ವಿನಂತಿಸಿಕೊಂಡರು. 

ಸಾಹಿತಿ ಲಿಂಗಾರೆಡ್ಡಿ ಆಲೂರ ಮಾತನಾಡುತ್ತಾ, 3ನೇ ಸಾಹಿತ್ಯ ಸಮ್ಮೇಳನವನ್ನು ಗಂಗಾವತಿ ನಗರದಲ್ಲಿ ಯಶಸ್ವಿಯಾಗಿಸಿದ ಕೀರ್ತಿ ಅವರದಾಗಿದೆ. ಈ ಸಮ್ಮೇಳನದ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಿ ಯಶಸ್ವಿಯಾಗಿಸಬೇಕೆಂದು ಹೇಳಿದರು.  

ಜಿಲ್ಲಾ ಕ.ಸಾ.ಪ. ಮಾಧ್ಯಮ ಪ್ರತಿನಿಧಿ ರಾಮಮೂರ್ತಿ ನವಲಿ, ಜಿಲ್ಲಾ ಸಾಂಸ್ಕೃತಿಕ ಕಸಾಪ ಪ್ರತಿನಿಧಿ ಶರಣೇಗೌಡ ಮಾ.ಪಾ. ಮಾತನಾಡಿ ಸಮ್ಮೇಳನದ ಯಶಸ್ವಿಗಾಗಿ ಸಹಕರಿಸಲು ಕೋರಿದರು. 

ಈ ಸಂದರ್ಭದಲ್ಲಿ ತಾಲೂಕು ಗೌರವ ಕಾರ್ಯದರ್ಶಿ ಶ್ರೀನಿವಾಸ ಅಂಗಡಿ, ವೀರಮಹೇಶ್ವರಿ, ಸದಸ್ಯರಾದ ರಮೇಶ ಕುಲಕರ್ಣಿ, ಮಾರುತಿ ಐಲಿ, ವಿರುಪಾಕ್ಷಪ್ಪ ಶಿರವಾರ, ಟಿ. ಆಂಜನೇಯ, ಶಿವಾನಂದ ತಿಮ್ಮಾಪುರ, ರುದ್ರಪ್ಪ ತಹಶೀಲ್ದಾರ ಉಪಸ್ಥಿತರಿದ್ದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News