ರಾಜಾಸೀಟು ಬಳಿ ವ್ಯಾಪಾರಕ್ಕೆ ನಿರ್ಬಂಧ : ನಗರಸಭೆ ವಿರುದ್ಧ ಪ್ರತಿಭಟನೆ

Update: 2018-01-18 17:11 GMT

ಮಡಿಕೇರಿ,ಜ.18 : ಪ್ರವಾಸೋದ್ಯಮ ಅಭಿವೃದ್ಧಿಯ ನೆಪವೊಡ್ಡಿ ಮಡಿಕೇರಿ ನಗರಸಭೆ ರಾಜಾಸೀಟು ಉದ್ಯಾನವನದ ಬಳಿ ಗಾಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ರಾತ್ರೋರಾತ್ರಿ ಬೀದಿಪಾಲು ಮಾಡಿದೆ. ಈ ಭಾಗದಲ್ಲಿ ವ್ಯಾಪಾರ ಮಾಡಬಾರದೆಂದು ಯಾವೊಬ್ಬ ವ್ಯಾಪಾರಿಗೂ ಮನ್ಸೂಚನೆ ನೀಡದೆ ಗಾಡಿಗಳನ್ನು ತೆರವುಗೊಳಿಸಿದ್ದು, ಬಡ ವ್ಯಾಪಾರಿಗಳು ಕಂಗಾಲಾಗಿದ್ದಾರೆ.    

ಬುಧವಾರ ರಾತ್ರಿ ನಗರಸಭೆ ತೆರವು ಕಾರ್ಯಾಚರಣೆ ನಡೆಸಿತು. ಅಧಿಕಾರಿಗಳ ಎದುರು ಜಮಾಯಿಸಿದ ಜನರು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 20-25 ವರ್ಷಗಳಿಂದ ರಾಜಾಸೀಟ್ ಬಳಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ ಬಡ ವ್ಯಾಪಾರಿಗಳ ಮೇಲೆ ಅಧಿಕಾರಿಗಳು ಗದಾ ಪ್ರಹಾರ ಮಾಡಿದ್ದಾರೆ ಎಂದು ಆರೋಪಿಸಿದರು. ನಗರಸಭೆಯ ಈ ದಿಢೀರ್ ನಿರ್ಧಾರದಿಂದಾಗಿ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಪೌರಯುಕ್ತರು ಸ್ಥಳಕ್ಕೆ ಬರಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ವ್ಯಾಪಾರಿಗಳ ಪರ ನಿಂತ ನಗರಸಭಾ ಸದಸ್ಯ ಅಮೀನ್ ಮೊಹಿಸಿನ್, ನೋಟಿಸ್ ನೀಡದೆ ಏಕಾಏಕಿ ವ್ಯಾಪಾರದ ಗಾಡಿಗಳನ್ನು ತೆರವು ಮಾಡಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರವಾಸೋದ್ಯಮದ ಅಭಿವೃದ್ಧಿಯ ನೆಪವೊಡ್ಡಿ ಬಡ ವ್ಯಾಪಾರಿಗಳ ಬದುಕಿನೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಇಲ್ಲಿನ ಬೀದಿ ಬದಿ ವ್ಯಾಪಾರಿಗಳು ಪ್ರವಾಸಿಗರನ್ನೇ ಅವಲಂಬಿಸಿದ್ದು, ಪ್ರವಾಸಿತಾಣದ ಬಳಿಯ ಪ್ರದೇಶ ವ್ಯಾಪಾರಕ್ಕೆ ಸೂಕ್ತವಾಗಿದೆ. ಬೇರೆಡೆ ವ್ಯಾಪಾರ ಮಾಡಿ ಎಂದು ಸೂಚಿಸಿದರೆ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಗುತ್ತದೆ. ಆದ್ದರಿಂದ ಬಡ ವ್ಯಾಪಾರಿಗಳಿಗೆ ಸೂಕ್ತ ವ್ಯವಸ್ಥೆಯನ್ನು ರಾಜಾಸೀಟ್ ಬಳಿಯೇ ಮಾಡಬೇಕೆಂದು ಅಮೀನ್ ಮೊಹಿಸಿನ್ ಒತ್ತಾಯಿಸಿದರು.  

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪೌರಯುಕ್ತರಾದ ಬಿ.ಶುಭ, ರಾಜಾಸೀಟ್ ಬಳಿ ಕೇವಲ 10 ಮಂದಿ ವ್ಯಾಪಾರಿಗಳಿಗೆ ಮಾತ್ರ ವಾಪಾರ ನಡೆಸಲು ಅವಕಾಶ ನೀಡಿ ಕಾರ್ಡ್‍ನ್ನು ವಿತರಿಸಲಾಗಿದೆ. ಕಾರ್ಡ್ ಹೊಂದಿಲ್ಲದವರಿಗೆ ಇಲ್ಲಿ  ವ್ಯಾಪಾರ ಮಾಡಲು ಅವಕಾಶವಿಲ್ಲವೆಂದರು. ಕಾರ್ಡ್ ಹೊಂದಿರುವವರು ಮಾತ್ರ  ರಾಜಾಸೀಟ್ ರಸ್ತೆ ಸಮೀಪ ವ್ಯಾಪಾರ ಮಾಡಬಹುದಾಗಿದೆ. ಕಾರ್ಡ್ ಹೊಂದಿಲ್ಲದವರನ್ನು ವಿಶೇಷವಾಗಿ ಪರಿಗಣಿಸಿ ಮುಂದಿನ 
ಸಾಮಾನ್ಯ ಸಭೆಯಲ್ಲಿ  ನಿರ್ಧಾರ ಕೈಗೊಳ್ಳಲಾಗುವುದು. ಈ ಬಗ್ಗೆ  ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.

ನಗರಸಭಾ ಸದಸ್ಯರಾದ ಕೆ.ಜೆ.ಪೀಟರ್, ಮನ್ಸೂರ್, ಪಿ.ಡಿ.ಪೊನ್ನಪ್ಪ, ಕೆ.ಎಸ್.ರಮೇಶ್, ಉಣ್ಣಿಕೃಷ್ಣ ಮತ್ತಿತರರು ಮಾನವೀಯ ದೃಷ್ಟಿಯಿಂದ ವ್ಯಾಪಾರ ನಡೆಸಲು ಅವಕಾಶ ನೀಡಬೇಕು. ಕಳೆದ 20-30ವರ್ಷಗಳಿಂದ ರಾಜಾಸೀಟ್‍ನಲ್ಲಿ ವ್ಯಾಪಾರ ನಡೆಸುವವರನ್ನು ಅಲ್ಲಿ ನೆಲೆಗೊಳಿಸಿ ಉಳಿದವರಿಗೆ ಬೇರೆಡೆ ಸ್ಥಳಾವಕಾಶ ನೀಡುವಂತೆ ಮನವಿ ಮಾಡಿದರು.

ಹೂವು ಹಣ್ಣು ಮಾರುವವರು ಬೆಳಗ್ಗೆ ಮಾತ್ರ ವ್ಯಾಪಾರ ನಡೆಸುತ್ತಾರೆ. ಉಳಿದ ಸಮಯದಲ್ಲಿ ಬ್ಯಾಡ್ಜ್ ಹೊಂದಿರುವ ಬೀದಿಬದಿ ವ್ಯಾಪಾರಿಗಳಿಗೆ ಈ ಸ್ಥಳವನ್ನು ಬಿಟ್ಟುಕೊಡುವಂತೆ ಸಲಹೆ ನೀಡಿದರು. ರಾಜಾಸೀಟ್ ಆವರಣದ ಶುಚಿತ್ವ ಮತ್ತು ಹಿಂದಿನಿಂದಲೂ ವ್ಯಾಪಾರ ನಡೆಸುತ್ತಿರುವವರಿಗೆ ಮಾತ್ರ ಅವಕಾಶ ಕಲ್ಪಿಸಿ ಉಳಿದ ವ್ಯಾಪಾರಸ್ಥರಿಗೆ ನಗರದ ಒಟ್ಟು ನಾಲ್ಕು ಕಡೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಪೌರಾಯುಕ್ತರು ಭರವಸೆ ನೀಡಿದರು.

ಬಳಿಕ ನಗರಸಭೆ ವಶಕ್ಕೆ ಪಡೆದಿದ್ದ ವಸ್ತುಗಳನ್ನು ಅದರ ಮಾಲೀಕರಿಗೆ ಹಿಂತಿರುಗಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News