ಮಂಡ್ಯ: ನಿವೇಶನ ಹಕ್ಕುಪತ್ರಕ್ಕೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ

Update: 2018-01-18 17:19 GMT

ಮಂಡ್ಯ, ಜ.18: ನಗರ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಭೂಮಿಯಲ್ಲಿ ವಾಸುತ್ತಿರುವ ಬಡವರು, ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಒತ್ತಾಯಿಸಿ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸದಸ್ಯರು ಗುರುವಾರದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದಿರುವುದಾಗಿ ಹೇಳಿರುವ ರಾಜ್ಯ ಸರಕಾರ ಸರಕಾರಿ ಭೂಮಿಯಲ್ಲಿರುವ ಬಡವರು, ಸ್ಲಂ ಜನರಿಗೆ ಹಕ್ಕುಪತ್ರ ನೀಡಿಲ್ಲ. ಸಲ್ಲಿಕೆಯಾಗಿರುವ ಒಂದೇ ಒಂದು ಅರ್ಜಿಯನ್ನೂ ಜಿಲ್ಲಾಡಳಿತ ವಿಲೇವಾರಿಗೊಳಿಸಿಲ್ಲ ಎಂದು ಅವರು ಆರೋಪಿಸಿದರು.

ಸರಕಾರಿ ಭೂಮಿಯಲ್ಲಿರುವ ವಾಸಿಗಳು ಹಕ್ಕುಪತ್ರ ಹೊಂದಿಲ್ಲವಾದ್ದರಿಂದ ಸರಕಾರದ ನಾನಾ ಯೋಜನೆಗಳಿಂದ ವಂಚಿತರಾಗಿದ್ದಾರೆ. ನುಡಿದಂತೆ ನಡೆಯುವ ಸರಕಾರವೆನ್ನುವ ಸಿದ್ದರಾಮಯ್ಯ ಕೂಡಲೇ ಬಡವರಿಗೆ ಹಕ್ಕುಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.

94ಸಿ ಮತ್ತು 94ಸಿಸಿ ಅಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ತ್ವರಿತವಾಗಿ ಕ್ರಮ ವಹಿಸಬೇಕು. ಖಾಸಗಿ ಭೂಮಿಗಳಲ್ಲಿರುವ ಬಡವರ ಮನೆಗಳಿಗೆ ಹಕ್ಕುಪತ್ರ ನೀಡಲು ಭೂಸ್ವಾಧೀನಕ್ಕಾಗಿ ಪ್ರಸಕ್ತ ಬಜೆಟ್‍ನಲ್ಲಿ ಕನಿಷ್ಟ 500 ಕೋಟಿ ರೂ. ಮೀಸಲಿಡಬೇಕು. ನಿವೇಶನರಹಿತರಿಗೆ ವಸತಿ ಒದಗಿಸಲು ಲ್ಯಾಂಡ್‍ಬ್ಯಾಂಕ್ ಯೋಜನೆ ಜಾರಿಗೊಳಿಸಬೇಕು ಮತ್ತು  ಸಮಗ್ರ ವಸತಿಹಕ್ಕು ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಗ್ರಾಮೀಣ ಪ್ರದೇಶಗಳ ವಸತಿರಹಿತರಿಗೆ ನಿವೇಶನ ಹಂಚಿಕೆ ಮಾಡಲು ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಬೇಕು. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವ ಆಟೋ ಚಾಲಕರು, ದಿನಗೂಲಿ ನೌಕರರು, ಸಣ್ಣ ವ್ಯಾಪಾರಿಗಳು, ಇತರೆ ಬಾಡಿಗೆ ಮನೆಯಲ್ಲಿರುವ ಬಡವರಿಗೆ ಉಚಿತವಾಗಿ ಮನೆ ನಿರ್ಮಿಸಿಕೊಡಬೇಕು. ಬೆಂಕಿ ಆನಾಹುತದಲ್ಲಿ ಗುಡಿಸಲು ಕಳೆದುಕೊಂಡಿರುವ ಕೀಲಾರದ ತಮಿಳು ನಿವಾಸಿಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಮಿತಿ ಸಂಚಾಲಕರಾದ ಎಂ.ಬಿ.ನಾಗಣ್ಣಗೌಡ, ಅಭಿಗೌಡ, ಎಂ.ಕೃಷ್ಣಮೂರ್ತಿ, ಆರ್.ಬಾಬು, ಮಕ್ಬುಲ್ ಅಹಮ್ಮದ್, ಲಕ್ಷ್ಮಿ, ಪದ್ಮಾವತಿ, ಲೋಕೇಶ್ ಆಚಾರ್, ಅರಕೇಶ್, ವಿಜಯ್, ಸ್ವಾಮಿ, ಪದ್ಮನಾಭ, ನಾಗರಾಜು, ಇತರರು ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News