ಮಂಡ್ಯ: ಹಳೇ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಧರಣಿ

Update: 2018-01-18 17:21 GMT

ಮಂಡ್ಯ, ಜ.18: ಅವೈಜ್ಞಾನಿಕ ನೂತನ ಎನ್‍ಪಿಎಸ್ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾದ್ಯಂತ ರಾಜ್ಯ ಸರಕಾರಿ ನೌಕರರು ಗುರುವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕೇಂದ್ರ ಸೇರಿದಂತೆ ಮದ್ದೂರು, ಮಳವಳ್ಳಿ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

2004ರಲ್ಲಿ ಕೇಂದ್ರ ಸರಕಾರ ಅವೈಜ್ಞಾನಿಕ, ಅಭದ್ರತೆಯಿಂದ ಕೂಡಿದ ಎನ್‍ಪಿಎಸ್ ಯೋಜನೆಯನ್ನು ಜಾರಿಗೊಳಿಸಿದ್ದು, 2006ರ ನಂತರ ನೇಮಕಗೊಂಡ ನೌಕರರಿಗೆ ಪಿಂಚಣಿ ಸೌಲಭ್ಯದಲ್ಲಿ ಹಲವು ನೂನ್ಯತೆ ಉಂಟಾಗುತ್ತದೆ ಎಂದು ಅವರು ಆರೋಪಿಸಿದರು.

ಈ ಅನಿಶ್ಚಿತ ಪಿಂಚಣಿ ಯೋಜನೆಯಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1.50 ಲಕ್ಷ ಸರಕಾರಿನೌಕರರು ಸೇವಾ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಇತರೆ ಸವಲತ್ತುಗಳಿಂದ ವಂಚಿತರಾಗಿ ಸಾಮಾಜಿಕ ಅನ್ಯಾಯಕ್ಕೆ ಒಳಗಾಗುತ್ತಾರೆ ಎಂದು ಅವರು ಹೇಳಿದರು.

ಎನ್‍ಪಿಎಸ್ ಯೋಜನೆಯನ್ನು ಅನುಷ್ಠಾನಗೊಳಿಸುವ ಅಥವಾ ರದ್ದುಪಡಿಸುವ ಮತ್ತು ಹಳೆ ಪಿಂಚಣಿಯನ್ನು ಮುಂದುವರಿಸುವ ಅಧಿಕಾರ ರಾಜ್ಯ ಸರಕಾರಕ್ಕಿದ್ದು, ಹಳೇ ಪಿಂಚಣಿ ಯೋಜನೆಯನ್ನು ಮುಂದುವರಿಸುವಂತೆ ಕರ್ನಾಟಕ ರಾಜ್ಯ 6ನೆ ವೇತನ ಆಯೋಗಕ್ಕೆ ಹಳೆ ಶಿಫಾರಸ್ಸು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಅಪ್ಪಾಜಪ್ಪ, ಎನ್‍ಪಿಎಸ್ ಸಂಚಾಲಕರು ಡಿ.ಜೆ.ಈಶ್ವರ್, ಚಂದ್ರಶೇಖರ್, ಹೇಮಣ್ಣ, ಮಂಜು, ನರಸಿಂಹೇಗೌಡ, ದೇವರಾಜು, ಟಿ.ರವಿಶಂಕರ್, ಇತರರು ನೇತೃತ್ವ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News