ಅಮೋನಿಯಾ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿ: ಸಾವಿರಾರು ಜನರ ಸ್ಥಳಾಂತರ

Update: 2018-01-19 06:33 GMT

ಗೋವಾ, ಜ.19: ಅಮೋನಿಯಾ ಸಾಗಿಸುತ್ತಿದ್ದ ಟ್ಯಾಂಕರೊಂದು ಪಲ್ಟಿಯಾದ ಘಟನೆ ಗೋವಾದ ವಾಸ್ಕೋ ಸಿಟಿ-ಪಣಜಿ ಹೆದ್ದಾರಿಯಲ್ಲಿ ನಡೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸಮೀಪದ ಚಿಕಾಲಿಮ್ ಗ್ರಾಮದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

“ಅಮೋನಿಯಾ ಹೊತ್ತು ಸಾಗುತ್ತಿದ್ದ ಟ್ಯಾಂಕ್ ರಾತ್ರಿ 2:45ಕ್ಕೆ ಪಲ್ಟಿಯಾಗಿದ್ದು, ಅನಿಲ ಸೋರಿಕೆಯಾಗಲು ಆರಂಭಿಸಿತ್ತು. ಕೂಡಲೇ ಪೊಲೀಸ್, ಅಗ್ನಿಶಾಮಕ ದಳ ಹಾಗು ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಿತು ಎಂದು ಜಿಲ್ಲಾಧಿಕಾರಿ ಮಹದೇವ್ ಅರೋನ್ದೇಕರ್ ಮಾಹಿತಿ ನೀಡಿದ್ದಾರೆ.

ಚಿಕಾಲಿಮ್ ಗ್ರಾಮದಾದ್ಯಂತ ಅನಿಲ ಹರಡುವ ಸಾಧ್ಯತೆ ಇರುವುದರಿಂದ ಗ್ರಾಮದಲ್ಲಿರುವ ಎಲ್ಲಾ ಜನರನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶದಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ ಎನ್ನಲಾಗಿದೆ.

“ಉಸಿರಾಟದ ತೊಂದರೆ ಕಾಣಿಸಿಕೊಂಡದ್ದರಿಂದ ಇಬ್ಬರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News