ಮೌಢ್ಯ, ಕಂದಾಚಾರಗಳಿಗೆ ಜೋತು ಬೀಳುತ್ತಿರುವುದು ವಿಷಾದನೀಯ: ಶಾಸಕ ಎಂ.ಕೆ.ಸೋಮಶೇಖರ್
ಮೈಸೂರು,ಜ.19: ನಾವುಗಳು 21ನೇ ಶತಮಾನಕ್ಕೆ ಕಾಲಿಟ್ಟರೂ ಇನ್ನೂ ಮೌಢ್ಯ ಮತ್ತು ಕಂದಾಚಾರಗಳಿಗೆ ಜೋತು ಬೀಳುತ್ತಿರುವುದು ವಿಷಾದನೀಯ ಎಂದು ಶಾಸಕ ಎಂ.ಕೆ.ಸೋಮಶೇಖರ್ ಅಭಿಪ್ರಾಯಪಟ್ಟರು.
ಕಲಾಮಂದಿರದ ಕಿರು ರಂಗಮಂದಿರಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀಮಹಾಯೋಗಿ ವೇಮನ ಜಯಂತ್ಯೋತ್ಸವವನ್ನು ಕವಿ ವೇಮನ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಮಾಜ ಪರಿವರ್ತನೆಗೆ ಹಲವಾರು ದಾರ್ಶನಿಕರು ಒತ್ತು ನೀಡಿದರು. ಅಂಥಹವರ ಜಯಂತಿಯನ್ನು ಸರ್ಕಾರ ಆಚರಿಸಿಕೊಂಡು ಬರುತ್ತಿದೆ. ಅಂತೆಯೇ ಮಹಾನ್ ಕವಿ ವೇಮನ ಜಯಂತಿಯನ್ನೂ ಆಚರಿಸಿದೆ ಎಂದರು.
ಮಹಾತ್ಮರ ಹಿನ್ನೆಲೆಗಳನ್ನು ನೋಡಿದಾಗ ವಿಚಿತ್ರವಾಗಿರತ್ತೆ ಮತ್ತು ರೋಚಕವಾಗಿರುತ್ತೆ. ವೇಮನ ಕೂಡ ವಿಚಿತ್ರವಾಗಿಯೇ ಇದ್ದ. ಸಾಹಿತ್ಯ ಕ್ಷೇತ್ರದ ಮೂಲಕ ಕ್ರಾಂತಿಕಾರಕ ಬದಲಾವಣೆಗೆ ಶ್ರಮಿಸಿದ. ಮೊದಲು ವೇಶ್ಯೆಯರ ಜೊತೆ ಇದ್ದು ದುರಾಚಾರಿಯಾಗಿ ಬಾಳುತ್ತಿದ್ದ ಈತ ತನ್ನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತಿನಿಂದ ಯಾವ ರೀತಿ ತನ್ನ ಜೀವನವನ್ನು ಬದಲಾಯಿಸಿಕೊಂಡ ಎಂಬುದನ್ನು ವಿವರಿಸಿದರು. ಬದುಕಿಗೆ, ಸಮಾಜಕ್ಕೆ ಹೊಸ ಚಿಂತನೆಗಳನ್ನು ನೀಡತೊಡಗಿದ. ನಾವು ಆಧುನಿಕ ಜಗತ್ತಿನಲ್ಲಿದ್ದರೂ ಇನ್ನೂ ಮೌಢ್ಯ ಕಂದಾಚಾರಗಳಿಗೆ ಜೋತುಬೀಳುತ್ತಿದ್ದೇವೆ. ಸರ್ಕಾರ ಮೌಢ್ಯನಿಷೇಧ ಕಾಯಿದೆ ಜಾರಿಗೆ ತಂದಿದೆ. ಆದರೂ ಮೌಢ್ಯ-ಕಂದಾಚಾರ ಮುಂದುವರಿಸಿದ್ದೇವೆ. ಪ್ರತಿ ಕ್ಷಣ ಕೂಡ ಮಹತ್ವದ್ದು. ವೈಚಾರಿಕತೆಗೆ ಒತ್ತು ನೀಡುವಂತಹ ಕೆಲಸಗಳು ಹೆಚ್ಚು ಹೆಚ್ಚು ನಡೆಯಬೇಕಿದೆ. ನಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡರೆ ಉದ್ಧಾರವಾಗಲು ಸಾಧ್ಯ. ವಾಮಮಾರ್ಗ ಬಳಸಬಾರದು. ವೈಜ್ಞಾನಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದರು.
ಸಾಹಿತಿ ಉಷಾ ನರಸಿಂಹನ್ ಮಾತನಾಡಿ ವೇಮನ ಮೇರು ಕವಿ. ಕವಿ ಭಾಷಾತ್ಮಕ, ಸೀಮಾತ್ಮಕ. ಆತನಿಗೆ ಎಲ್ಲೆಗಳಿಲ್ಲ. ಎಷ್ಟೋ ಮಹಾನ್ ಕವಿಗಳ ಆಲೋಚನೆಗಳು ಪುಸ್ತಕಗಳಾಗಿವೆ. ಕವಿ ಅನಭಿಷಕ್ತ, ಕವಿತೆ ಶಾಸನ. ಕವಿಯ ಕಾವ್ಯಗಳು ಮನಸ್ಸನ್ನು ತುಂಬಿರುತ್ತವೆ. ದೇಶಾತೀತ, ಭಾಷಾತೀತ. ಕವಿತೆ ವ್ಯಕ್ತಿತ್ವಕ್ಕೆ ಸೌಂದರ್ಯವನ್ನೂ, ಬದುಕಿಗೆ ಸತ್ಯವನ್ನೂ ಕಟ್ಟಿಕೊಡಲಿದೆ. ಸಾಗರದಾಚೆಯ ಕವಿಗಳೂ ಕೂಡ ಕವಿತೆಯನ್ನು ಕಟ್ಟಿ ಬೆಳೆಸುತ್ತಾರೆ. ಅಂತಹ ಕವಿಗಳಲ್ಲಿ ಒಬ್ಬರಾದ ನಮ್ಮ ಸೋದರ ಭಾಷೆ ತೆಲುಗಿನ ಕವಿ ವೇಮನ ಜನ್ಮದಿನಾಚರಣೆಯನ್ನು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ವೇಮನ ಕೃತಿಗಳು ಎಷ್ಟೋ ಭಾಷೆಗೆ ತರ್ಜುಮೆಗೊಂಡಿವೆ. 20ನೇ ಶತಮಾನದ ಮಧ್ಯಭಾಗದವರೆಗೂ ಈತನ ಪರಿಚಯವಿರಲಿಲ್ಲ. ನಂತರ ಆತ ಬೆಳಕಿಗೆ ಬಂದ. ಎಷ್ಟು ದಿನ ಆತನ ಪ್ರತಿಭೆಯನ್ನು ಮುಚ್ಚಿಡಲು ಸಾಧ್ಯ.ಅವನ ಕೃತಿಗಳನ್ನು ಓದಿದ ಪಾಶ್ಚಾತ್ಯರು ಪ್ರಭಾವಿತರಾದರು. ಅವರ ಕೃತಿಗಳಿಗೆ ಅಂಥಹ ಶಕ್ತಿ ಇತ್ತು ಎಂದು ವರ್ಣಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಯೋಗೀಶ್, ತಾಯೂರು ವಿಠಲ ಮೂರ್ತಿ, ವಿಶ್ವನಾಥ್, ಸಹಾಯಕ ನಿರ್ದೇಶಕ ಚನ್ನಪ್ಪ ಮತ್ತಿತರರು ಉಪಸ್ಥಿತರಿದ್ದರು.