×
Ad

ಮೈಸೂರು: ವೀಸಾ ಅವಧಿ ಮುಗಿದರೂ ವಾಸಿಸುತ್ತಿದ್ದ 8 ಮಂದಿ ವಿದೇಶಿಗರ ಬಂಧನ

Update: 2018-01-19 20:54 IST

ಮೈಸೂರು,ಜ.19: ವೀಸಾ ಅವಧಿ ಮುಗಿದರೂ ಮೈಸೂರಿನಲ್ಲಿ ಅನಧಿಕೃತವಾಗಿ ವಾಸಿಸಿದ್ದ 8ಮಂದಿ ವಿದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 

ಬಂಧಿತರನ್ನು ಸೋಮಾಲಿಯಾದ ಅಬ್ಬಿವಾಡಡ್, ಮೊಹಮದ್ ಅಬ್ದಿ, ಮೊಜಾಂಬಿಕ್ ನ ಐವಾಸ್ ಸಾಲೋಮಾವೋ ಸಿಂಬೈಸ್, ನಮಿಬಿಯಾದ ವಿಲ್ ಹೆತ್ಮ್ ಶಲೊಂಗೋ ಶಾಪಾಮಜೆ, ತಾಂಜೇನಿಯಾದ ಅತುಫೆಲ್ ಫ್ರೈಡೇ ಮಾಕ್ಯೂಶ್, ಎವಾನ್ಸ್ ದಮಾಸಿ, ಕೀನ್ಯಾದ ಜಸ್ಟಿಸ್ ಬಕುಕು ಬಕುಮು, ತಾಂಜೇನಿಯಾದ ಐವಾನ್ ಎಮಿಲಿಯಸ್ ರಿವಾ ಹಾಗೂ ಮಲೇಷಿಯಾದ ಮಹಮದ್ ಶೈಫಿ ಎಂದು ಹೇಳಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಮೈಸೂರು ಕಮೀಷನರ್ ಕಚೇರಿಯಲ್ಲಿನ ನಗರ ವಿಶೇಷ ಘಟಕದ ಇನ್ಸಪೆಕ್ಟರ್  ಆರ್.ಪಿ.ಅಶೋಕ್ ಮತ್ತವರ ತಂಡದ ಸಿಬ್ಬಂದಿಗಳು ಮೇಟಗಳ್ಳಿ, ಎನ್.ಆರ್.ಮೊಹಲ್ಲಾ, ವಿಜಯನಗರ, ವಿವಿಪುರಂ ಠಾಣೆಗಳಲ್ಲಿ ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಎಂಟು ಮಂದಿ ವಿದೇಶಿ ಪ್ರಜೆಗಳು ವಾಸ್ತವ್ಯ ಹೂಡಿದ್ದು ತಿಳಿದು ಬಂದಿತ್ತು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಿದ್ಯಾಭ್ಯಾಸಕ್ಕೆಂದು ಬಂದು ಅನುತ್ತೀರ್ಣರಾದಾಗ ವೀಸಾ ಅವಧಿ ಮುಗಿದಿದ್ದು ಸಪ್ಲಿಮೆಂಟರಿ ಪರೀಕ್ಷೆಗಾಗಿ ಇಲ್ಲೆ ವಾಸ್ತವ್ಯ ಹೂಡಿ ತಮ್ಮ ಮನಬಂದಂತೆ ವರ್ತಿಸಿ ಇತರರಿಗೆ ತೊಂದರೆ ಕೊಡುತ್ತಾರೆ ಎಂದು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯ ಹೈಕೋರ್ಟ್ 2016 ಫೆ 18ರಂದು ಅಕ್ರಮ ವಾಸ್ತವ್ಯದ ಮೇಲೆ ಬಂಧಿತರಾದ ವಿದೇಶಿಗರಿಗೆ ತೀರ್ಪು ಹೊರಬೀಳುವವರೆಗೂ ಜಾಮೀನು ನೀಡುವಂತಿಲ್ಲ ಎಂಬುದಾಗಿ ತಿಳಿಸಿದ್ದು, ಜಾಮೀನು ಪಡೆದು ಈಗಾಗಲೇ ಹೊರಬಂದಿರುವ ವಿದೇಶಿಗರ ಜಾಮೀನು ರದ್ದು ಪಡಿಸಲು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಡಿಸಿಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News