ಮಡಿಕೇರಿ: ಎನ್ನೆಸ್ಸೆಸ್ ಶಿಬಿರದಲ್ಲಿ ವಿಲಕ್ಷಣವಾಗಿ ವರ್ತಿಸಿದ ವಿದ್ಯಾರ್ಥಿನಿಯರು!
ಮಡಿಕೇರಿ, ಜ.19: ವೀರಾಜಪೇಟೆಯ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮೈತಾಡಿ ಗ್ರಾಮದ ಶಾಲೆಯೊಂದರಲ್ಲಿ ಎನ್ನೆಸ್ಸೆಸ್ ಶಿಬಿರದ ಕಾರ್ಯಕ್ರಮದಲ್ಲಿ ವಿಲಕ್ಷಣವಾಗಿ ವರ್ತಿಸಿ ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ಸಂಭವಿಸಿದೆ.
ಶಿಬಿರದ ಕೊನೆಯ ದಿನವಾದ ಗುರುವಾರ ಸಂಜೆ ಭಾವೈಕ್ಯತಾ ಸಂದೇಶ ಸಾರುವ ನಿಟ್ಟಿನಲ್ಲಿ ವಿದ್ಯಾರ್ಥಿಗಳೆಲ್ಲರು ರಾತ್ರಿ 9:30ಕ್ಕೆ ಸಾಮೂಹಿಕವಾಗಿ ದೀಪ ಬೆಳಗುತ್ತಿದ್ದರು.
ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ 20ಕ್ಕೂ ಅಧಿಕ ವಿದ್ಯಾರ್ಥಿನಿಯರು ವಿಚಿತ್ರವಾಗಿ ಕಿರುಚುತ್ತಾ ಕುಣಿದಾಡಲು ಶುರು ಮಾಡಿದ್ದಾರೆ. ಕೆಲವರು ಅಲ್ಲೇ ಬಿದ್ದಿದ್ದಾರೆ. ಬಹಳ ಹೊತ್ತಾದರೂ ಇದು ನಿಯಂತ್ರಣವಾಗಿಲ್ಲ. ಕೆಲವು ವಿದ್ಯಾರ್ಥಿನಿಯರು ವಿಚಿತ್ರವಾಗಿ ವರ್ತಿಸುತ್ತಾ, ಯಾರೋ ಸತ್ತು ಹೋದವರ ಹೆಸರು ಹೇಳುತ್ತಾ ನಾನೇ ಅವನು, ನನ್ನನ್ನು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಎಂದೆಲ್ಲಾ ಹೇಳಿದ್ದಾರೆ ಎನ್ನಲಾಗಿದೆ.
ತಕ್ಷಣ ಅವರನ್ನು ವೈದ್ಯರಲ್ಲಿಗೆ ಕೊಂಡೊಯ್ಯಬೇಕಾಗಿದ್ದ ಶಿಕ್ಷಕರು ಸ್ಥಳೀಯ ಅರ್ಚಕರೊಬ್ಬರನ್ನು ಕರೆದು ಪರಿಹಾರ ಮಾಡಿಸಿ ಮೌಢ್ಯಕ್ಕೆ ಶರಣಾದ ಘಟನೆಯೂ ಈ ಸಂದರ್ಭದಲ್ಲಿ ನಡೆದಿದೆ.
ಆದರೆ ಮರುದಿನ ಬೆಳಗ್ಗೆ ಮತ್ತೆ ಅದೇ ರೀತಿ ವಿಚಿತ್ರ ವರ್ತನೆಗಳು ಮುಂದುವರಿದಾಗ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವಿದ್ಯಾರ್ಥಿನಿಯರ ಸ್ಥಿತಿ ಕಂಡು ಸ್ವತಃ ವೈದ್ಯರೇ ಹೌಹಾರಿದ್ದಾರೆ. ಕೆಲವು ಪೋಷಕರು ಭೂತದ ಕಾಟವೆಂದು ಹೆದರಿ ವಿದ್ಯಾರ್ಥಿನಿಯರನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಮಧ್ಯಾಹ್ನದ ವೇಳೆಗೆ ಬಹುತೇಕ ವಿದ್ಯಾರ್ಥಿನಿಯರು ಸುಧಾರಿಸಿಕೊಂಡು ಮನೆಗೆ ತೆರಳಿದರು. ಆದರೆ ಅದೇ ವೇಳೆಗೆ ಮತ್ತೆ ಮೂವರು ವಿದ್ಯಾರ್ಥಿನಿಯರು ಭೂತ ಹಿಡಿದವರಂತೆ ವಿಚಿತ್ರವಾಗಿ ವರ್ತಿಸಲಾರಂಭಿಸಿದ್ದಾರೆ. ಸೂಕ್ತ ಮಾನಸಿಕ ವೈದ್ಯರಲ್ಲಿಗೆ ಕರೆದೊಯ್ಯದೇ ಭೂತಪ್ರೇತವೆಂದು ಪೋಷಕರು ಮತ್ತು ಶಿಕ್ಷಕರು ಅರ್ಚಕರ ಮೊರೆ ಹೋಗಿದ್ದು ಪರಿಸ್ಥಿತಿ ಹದಗೆಡಲು ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಈ ಘಟನೆ ನಮಗೆಲ್ಲಾ ಬಹಳ ವಿಚಿತ್ರವೆನಿಸಿದೆ. ನಾವು ಯುವ ಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಎನ್ನೆಸ್ಸೆಸ್ ಶಿಬಿರದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಈ ರೀತಿ ನಡೆದಿರುವುದು ಅಚ್ಚರಿಯಾಗಿದೆ ಎಂದು ಎನ್ನೆಸ್ಸೆಸ್ ಅಧಿಕಾರಿ ವನೀತ್ ಅಭಿಪ್ರಾಯಪಟ್ಟಿದ್ದಾರೆ.