×
Ad

ಹನೂರು: 140 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪ್ರತಿ ವಿತರಣೆ

Update: 2018-01-19 22:33 IST

ಹನೂರು,ಜ.19: ಕ್ಷೇತ್ರ ವ್ಯಾಪ್ತಿಯ ಬೇಡಗಂಪಣ ಸಮುದಾಯದವರಿಗೆ ವಿಶೇಷ ಯೋಜನೆಯಡಿ 400 ಮನೆಗಳು ಮಂಜೂರಾಗಿದ್ದು, ಮೊದಲ ಹಂತದಲ್ಲಿ 140 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪ್ರತಿಯನ್ನು ವಿತರಿಸಲಾಗುತ್ತಿದೆ ಎಂದು ಶಾಸಕ ನರೇಂದ್ರ ತಿಳಿಸಿದರು.

ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದ ಆವರಣದಲ್ಲಿ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕ ನರೇಂದ್ರ, ಈ ಹಿಂದೆ ಒಂದೂವರೆ ವರ್ಷದ ಹಿಂದೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದ ವೇಳೆ ಇಲ್ಲಿನ ಬೇಡಗಂಪಣರ ಸಮಸ್ಯೆಗಳನ್ನು ವಿವರಿಸಿ ವಿಶೇಷ ಅನುದಾನ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಗಮನಹರಿಸಿದ್ದ ಮುಖ್ಯಮಂತ್ರಿಗಳು ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನಲ್ಲಿ ವಾಸಿಸುತ್ತಿರುವ ಆನೆಹೊಲ, ನಾಗಮಲೆ, ಕೀರೆಹೊಲ, ಇಂಡಿಗನತ್ತ, ಪಡುಸಲನತ್ತ, ಗೊರಸಾಣೆ ಸೇರಿದಂತೆ ಕ್ಷೇತ್ರದ ವಿವಿಧೆಡೆಗಳಲ್ಲಿ ವಾಸಿಸುವ 400 ಫಲಾನುಭವಿಗಳಿಗೆ ಮನೆ ಮಂಜೂರಾತಿಗಾಗಿ ಆದೇಶಿಸಿದ್ದರು. ಈ ಪೈಕಿ ಮೊದಲ ಹಂತದಲ್ಲಿ 140 ಫಲಾನುಭವಿಗಳಿಗೆ ಮಂಜೂರಾಥಿ ಪತ್ರ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಹಂತ-ಹಂತದ ಭಾವಚಿತ್ರ ಗಣಕೀಕರಣಗೊಳಿಸಿ:  ಕಾರ್ಯಾದೇಶ ಪತ್ರ ಪಡೆದಿರುವ ಫಲಾನುಭವಿಗಳು ಮುಂದಿನ 15 ದಿನಗಳೊಳಗಾಗಿ ಮನೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕು. ಬಳಿಕ ಮನೆಯ ತಳಪಾಯ, ಲಿಂಟಲ್, ರೂಫಿಂಗ್ ಮತ್ತು ಪೂರ್ಣಗೊಂಡ ಮನೆಯ ಭಾವಚಿತ್ರಗಳನ್ನು ಹಂತ ಹಂತವಾಗಿ ಪಂಚಾಯತ್ ಅಧಿಕಾರಿಗಳ ಮೂಲಕ ಜಿಪಿಎಸ್ ತಂತ್ರಜ್ಞಾನದಲ್ಲಿ ಅಳವಡಿಸಿದಲ್ಲಿ ನೇರವಾಗಿ ಫಲಾನುಭವಿಯ ಖಾತೆಗೆ ಹಣ ಜಮಾವಣೆಯಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಮತ್ತು ಗ್ರಾ.ಪಂ ಅಧಿಕಾರಿಗಳು ಪರಿಶೀಲನೆ ನಡೆಸಿ ಶೇ.100 ಗುರಿ ತಲುಪುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಬ್ಲಾಕ್‍ ಕಾಂಗ್ರೆಸ್ ಅಧ್ಯಕ್ಷ ಈಶ್ವರ್, ತಾ.ಪಂ ಸದಸ್ಯ ಜವಾದ್ ಅಹಮ್ಮದ್,ಮುಖಂಡರಾದ ರವಿಕುಮಾರ್, ಮಾರ್ಟಳ್ಳಿ ರಾಮಲಿಂಗು, ಮಹಾದೇವು ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News