×
Ad

ಶಿರಾಡಿ ಘಾಟ್ ರಸ್ತೆ ಬಂದ್: ಜಿಲ್ಲಾಧಿಕಾರಿಯಿಂದ ವಿಶೇಷ ಸಭೆ

Update: 2018-01-19 22:54 IST

ಮಡಿಕೇರಿ, ಜ.19 : ಇದೇ ಜ.20 ರಿಂದ ಶಿರಾಡಿ ಘಾಟ್ ರಸ್ತೆ ದುರಸ್ತಿ ಕಾರ್ಯ ನಡೆಯುವ ಹಿನ್ನೆಲೆ, ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಈ ಕಾರಣದಿಂದ ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ಮಾರ್ಗದಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ಸಂಪಾಜೆ- ಕುಶಾಲನಗರ ಮಾರ್ಗದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರೆಗೆ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡಲು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.    

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೊಡಗು ಬೆಟ್ಟ-ಗುಡ್ಡ ಪ್ರದೇಶವಾಗಿದ್ದು ಕಿರಿದಾದ ರಸ್ತೆ ಹೊಂದಿದೆ. ಆ ನಿಟ್ಟಿನಲ್ಲಿ ಅಪಘಾತಗಳು ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ಪಷ್ಟ ನಿರ್ದೇಶನ ನೀಡಿದರು. 

ಸಂಪಾಜೆ, ಮಡಿಕೇರಿ ಮತ್ತು ಕುಶಾಲನಗರ ಮಾರ್ಗದಲ್ಲಿ ಅಗತ್ಯವಿರುವೆಡೆ ನಾಮ ಫಲಕ ಅಳವಡಿಸಬೇಕು. ಪೊಲೀಸ್ ಹಾಗೂ ಹೆದ್ದಾರಿ ವಿಭಾಗದ ಎಂಜಿನಿಯರ್‍ಗಳು ಸಂಪಾಜೆ-ಕುಶಾಲನಗರ ಮಾರ್ಗದ ವರೆಗೆ ಜಂಟಿ ಸಮೀಕ್ಷೆ ಮಾಡಿ ತಿರುವುಗಳು ಹಾಗೂ ಅಗತ್ಯ ಇರುವ ಕಡೆ ನಾಮಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. 

ಹೆದ್ದಾರಿ ವಿಭಾಗದ ಕಚೇರಿಗಳು ಮಂಗಳೂರು ಮತ್ತು ಮೈಸೂರಿನಲ್ಲಿ ಇರುವುದರಿಂದ, ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ತಕ್ಷಣ ಸ್ಪಂದಿಸಲು ಕೊಡಗು ಜಿಲ್ಲಾ ಮಡಿಕೇರಿ ಕೇಂದ್ರದಲ್ಲಿ ಹೆದ್ದಾರಿ ವಿಭಾಗದಿಂದ ಒಬ್ಬ ಎಂಜಿನಿಯರ್, ಒಬ್ಬ ಏಜೆನ್ಸಿಯನ್ನು ನಿಯೋಜಿಸುವಂತೆ ಹೆದ್ದಾರಿ ಇಲಾಖೆ ಎಂಜಿನಿಯರ್‍ಗೆ ಪಿ.ಐ.ಶ್ರೀವಿದ್ಯಾ ಅವರು ನಿರ್ದೇಶನ ನೀಡಿದರು.  

ಭಾರೀ ವಾಹನಗಳು (ಬಿ ಕ್ಯಾಟಗರಿ ವಾಹನ) ಯಾವ ಸಮಯದಲ್ಲಿ ಸಂಚಾರ ಮಾಡಬೇಕು, ನಿಯಮ ಉಲ್ಲಂಘಸಿದಲ್ಲಿ ದಂಡ ವಿಧಿಸುವುದರ ಬಗ್ಗೆ ಸಂಪಾಜೆ, ಮಡಿಕೇರಿ ಹಾಗೂ ಕುಶಾಲನಗರದಲ್ಲಿ ದೊಡ್ಡ ನಾಮಫಲಕ ಅಳವಡಿಸಬೇಕು. ವಾಹನ ಸಂಚಾರ ನಿಷೇಧ ಸಂಬಂಧ ಜಿಲ್ಲಾಡಳಿತ ಹೊರಡಿಸುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿ.ಪಂ.ಸಿಇಓ ಪ್ರಶಾಂತ್ ಕುಮಾರ್ ಮಿಶ್ರ ಅವರು ಜಿಲ್ಲೆಯಲ್ಲಿ ಯಾವುದೇ ರೀತಿಯ ಅಪಘಾತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೆಕು. ಆ ನಿಟ್ಟಿನಲಿ ಸರ್ಕಾರದ ನಿಯಮ ಪಾಲಿಸಬೇಕು ಎಂದು ಸೂಚನೆ ನೀಡಿದರು.        

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಭಾಗ್ಯ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಪುಟ್ಟಸ್ವಾಮಿ, ಪೌರಯುಕ್ತರಾದ ಬಿ.ಶುಭಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್, ಪ್ರಾದೇಶಿಕ ಸಾರಿಗೆ ಕಚೇರಿಯ ರೀಟಾ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಎಂಜಿನಿಯರ್ ಇತರರು ಹಾಜರಿದ್ದರು.  

ನಿರ್ಬಂಧಿತ ವಾಹನಗಳು
ವಾಹನದ ನೋಂದಣಿ ತೂಕ 16,200 ಕೆ.ಜಿ.ಗಿಂತ ಹೆಚ್ಚಿನ ಸರಕು ಸಾಗಾಣೆ ಮಾಡುವ ಸರಕು ಸಾಗಾಣಿಕೆ ವಾಹನಗಳು. ಭಾರೀ ವಾಹನಗಳಾದ  ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್ (ಮಲ್ಟಿ ಆಕ್ಸಿಲ್) ವಾಹನಗಳು 

ವಿನಾಯಿತಿ ಪಡೆದ ವಾಹನಗಳು
ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು. ಹಾಲು ಪೂರೈಕೆ ವಾಹನಗಳು. ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು. ಶಾಲಾ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕ ವಾಹನಗಳು (ಮಲ್ಟಿ ಆಕ್ಸಿಲ್ ಬಸ್‍ಗಳು ಸೇರಿದಂತೆ). 

ಈ ಬಗ್ಗೆ ಅವಶ್ಯವಿರುವ ಸಂಜ್ಞೆ/ಸೂಚನಾ ಫಲಕವನ್ನು ಅಳವಡಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಅನುಮತಿಸಿದೆ. 
ಕೊಡಗು ಜಿಲ್ಲೆಯ ಮುಖಾಂತರ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಜಿಲ್ಲೆಯ ಗಡಿಭಾಗಗಳಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ವ್ಯವಸ್ಥಿತ ಚೆಕ್‍ಪೋಸ್ಟ್ ನಿರ್ಮಿಸಿ, ದಿನದ 24ಗಂಟೆಯೂ ಗಸ್ತು ಕಾಯುವಂತೆ ಸಿಬ್ಬಂದಿಗಳನ್ನು ನಿಯೋಜಿಸಲು, ಮೊಬೈಲ್ ಪ್ಯಾಟ್ರೋಲಿಂಗ್ ನಡೆಸಲು ಹಾಗೂ ಈ ಆದೇಶ ಉಲ್ಲಂಘನೆಯಾಗದಂತೆ ಮತ್ತು ಆದೇಶ ಉಲ್ಲಂಘಿಸಿದವರ ವಿರುದ್ದ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲು ಆರಕ್ಷಕ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News