ಯಾವುದೇ ಜಾತಿಗೆ ಸಿಮೀತವಾಗದೆ ಮೊದಲು ಮಾನವನಾಗು : ರಫೀಕ್ ಅಹಮದ್

Update: 2018-01-19 18:08 GMT

ತುಮಕೂರು,ಜ.19: ಮಹಾಯೋಗಿ“ವೇಮನ” ಪ್ರತಿಪಾದಿಸಿದಂತೆ ಯಾವುದೇ ಜಾತಿಗೆ ಸಿಮೀತವಾಗದೆ ಮೊದಲು ಮಾನವನಾಗಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿದೆ ಎಂದು ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ. 

ನಗರದ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ರೆಡ್ಡಿ ಜನಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೆಡ್ಡಿ ಸಮುದಾಯದ ಒತ್ತಾಯದ ಮೇರೆಗೆ ಸರಕಾರ ವೇಮನ ಜಯಂತಿ ಆಚರಣೆ ಮಾಡಲು ಅವಕಾಶ ನೀಡಿದ್ದು, ಅದರಂತೆ ಮೊದಲ ಬಾರಿಗೆ ನಗರದಲ್ಲಿ ಆಚರಣೆ ಮಾಡುತ್ತಿರುವುದು ಸಂತೋಷದ ವಿಷಯವಾಗಿದೆ. ವೇಮನ ಲೋಕಶುದ್ಧಿಗೆ ಪೂರಕವಾದ ಸಾಹಿತ್ಯವನ್ನು ರಚಿಸಿ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಮಹಾಯೋಗಿ. ಆಂಧ್ರದಲ್ಲಿ ಮಾತ್ರವಲ್ಲದೆ ಅನ್ಯರಾಜ್ಯಗಳಲ್ಲಿಯೂ ಇವರ ವಿಚಾರಧಾರೆಗಳು ವ್ಯಾಪಕವಾಗಿದ್ದು,ಎಲ್ಲ ಸಮುದಾಯದವರು ಅಳವಡಿಸಿಕೊಳ್ಳಬೇಕು ಎಂದರು. 

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ,ವೇಮನ ಒಂದು ವಾಕ್ಯದಲ್ಲಿ ನಾನಾರ್ಥಗಳನ್ನು ಸಾರುವಂತಹ ಸಾಹಿತ್ಯವನ್ನು ರಚಿಸಿದ್ದಾರೆ. ಸಮಾಜದಲ್ಲಿನ ನೈಜತೆಯನ್ನು ಬಿಂಬಿಸುವ ಸಾಹಿತ್ಯದ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಅವರ ವಿಚಾರಧಾರೆಯನ್ನು ಅರಿತುಕೊಂಡು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಸಾಮಾಜಿಕ ಬದಲಾವಣೆ ಕಾಣಲು ಸಾಧ್ಯ ಎಂದು ಅವರು ತಿಳಿಸಿದರು. 

ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ.ವೆಂಕಟರೆಡ್ಡಿ ರಾಮರೆಡ್ಡಿ ವೇಮನ ಬಗ್ಗೆ ಉಪನ್ಯಾನ ನೀಡಿ, ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳುವರ್‍ನಂತೆ ತೆಲುಗಿನಲ್ಲಿ ವೇಮನ ಪ್ರಸಿದ್ದರು. ಉತ್ತಮ ಸಮಾಜಕ್ಕಾಗಿ ಹಲವು ರೀತಿಯಲ್ಲಿ ಸಾಹಿತ್ಯದ ರೂಪದಲ್ಲಿ ಜನರಲ್ಲಿ ಅರಿವು ಮೂಡಿಸಿದವರು. ತಮ್ಮ ಆಧ್ಯಾತ್ಮಿಕ ಬದುಕಿನಿಂದ ಅನ್ಯಾಯದ ವಿರುದ್ಧ ದನಿಯೆತ್ತಿದವರು ಎಂದು ವೇಮನ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. 

ಈ ಸಂದರ್ಭದಲ್ಲಿ ರೆಡ್ಡಿ ಜನಾಂಗದಲ್ಲಿ ಸಾಧನೆ ಮಾಡಿದ ಮಧುಗಿರಿಯ ಕೆ.ಹೆಚ್.ನಾರಾಯಣರೆಡ್ಡಿ, ಪಾವಗಡದ ರಾಷ್ಟ್ರೀಯ ಕಿಸಾನ್ ಸಂಘದ ವಿ.ನಾಗಭೂಷಣರೆಡ್ಡಿ, ಪಾವಗಡ ತಾಲೂಕು ರೈತ ಸಂಘದ ಜಿ.ನರಸಿಂಹರೆಡ್ಡಿ, ಕೆ.ಎಸ್.ಇ.ಎಫ್. ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಆರ್.ವೈಜಯಂತಿ ಬಾಬುರೆಡ್ಡಿ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷ ಕೆ.ಶ್ರೀನಿವಾಸ್ ರೆಡ್ಡಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News