ತೊಗಾಡಿಯಾ ಮೊಸಳೆ ಕಣ್ಣೀರು

Update: 2018-01-19 18:52 GMT

ವಿಶ್ವ ಹಿಂದೂ ಪರಿಷತ್‌ನ ಮುಖಂಡ ಪ್ರವೀಣ್ ತೊಗಾಡಿಯಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ನಾಲ್ಕು ದಿನಗಳ ಹಿಂದೆ ಅವರು ತಮ್ಮ ನಿವಾಸದಿಂದ ಏಕಾಏಕಿ ನಾಪತ್ತೆಯಾದರು. ಇದಾದ ಬೆನ್ನಿಗೆ ವಿಎಚ್‌ಪಿಯ ಕಾರ್ಯಕರ್ತರು ಬೀದಿಗಿಳಿದು ರಾಜಸ್ಥಾನ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ತೊಗಾಡಿಯಾ ಅವರನ್ನು ರಾಜಸ್ಥಾನದ ಪೊಲೀಸರು ಎನ್‌ಕೌಂಟರ್ ಮಾಡಲು ಸಂಚು ಹೂಡಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು.

ಈ ನಾಟಕೀಯ ಬೆಳವಣಿಗೆಯ ಬಳಿಕ ಪ್ರವೀಣ್ ತೊಗಾಡಿಯಾ ಆಸ್ಪತ್ರೆಯೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾದರು. ಮರುದಿನ ಪತ್ರಿಕಾಗೋಷ್ಠಿ ಕರೆದ ಪ್ರವೀಣ್ ತೊಗಾಡಿಯಾ ‘‘ರಾಜಸ್ಥಾನದ ಪೊಲೀಸರು ತನ್ನನ್ನು ಎನ್‌ಕೌಂಟರ್ ಮಾಡಿ ಕೊಂದು ಹಾಕಲು ಸಿದ್ಧತೆ ನಡೆಸಿದ್ದರು. ಪೂರ್ವ ಮಾಹಿತಿ ಸಿಕ್ಕಿದ್ದರಿಂದ ತಾನು ಅದರಿಂದ ಪಾರಾದೆ’’ ಎಂದು ಕಣ್ಣೀರು ಹಾಕುತ್ತಾ ನುಡಿದರು. ಅಷ್ಟೇ ಅಲ್ಲ, ‘‘ಪ್ರಧಾನಿ ಮೋದಿ ಗುಜರಾತ್ ಪೊಲೀಸ್ ಇಲಾಖೆಯ ಜೊತೆ ಸೇರಿಕೊಂಡು ತನ್ನ ವಿರುದ್ಧ ಸಂಚು ನಡೆಸುತ್ತಿದ್ದಾರೆ. ತನ್ನ ಕಾರ್ಯಕರ್ತರನ್ನು ಶೋಷಿಸುತ್ತಿದ್ದಾರೆ’’ ಎಂದು ಅಲವತ್ತುಕೊಂಡಿದ್ದಾರೆ.

ಪ್ರವೀಣ್ ತೊಗಾಡಿಯಾ ಅವರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳಿವೆ. ನಮ್ಮ ಕಾನೂನು ವ್ಯವಸ್ಥೆ ಸರಿದಾರಿಯಲ್ಲಿ ಇದ್ದಿದ್ದರೆ, ಇಂತಹದೊಂದು ಪತ್ರಿಕಾಗೋಷ್ಠಿಯನ್ನು ಅವರು ದಶಕದ ಹಿಂದೆಯೇ ಮಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಅವರ ಮೇಲೆ ಹಲವು ಕ್ರಿಮಿನಲ್ ಪ್ರಕರಣಗಳಿದ್ದು, ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬೆನ್ನು ಬಿದ್ದಿದ್ದಾರೆ. ರಾಜಸ್ಥಾನದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ ಎಂದಾಕ್ಷಣ ಅವರ ಮೇಲಿರುವ ಪ್ರಕರಣದ ಕುರಿತಂತೆ ಆ ಸರಕಾರಗಳು ಮೃದು ಧೋರಣೆ ನಡೆಸಬೇಕಾಗಿಲ್ಲ. ಒಂದು ರೀತಿಯಲ್ಲಿ, ಯುಪಿಎ ಸರಕಾರ ಮಾಡಬೇಕಾದ ಕೆಲಸವನ್ನು ಮೋದಿ ನೇತೃತ್ವದ ಸರಕಾರ ಮಾಡಲು ಹೊರಟಿದೆ. ಇದು ಅಭಿನಂದನಾರ್ಹ. ವಿಪರ್ಯಾಸವೆಂದರೆ, ಮಾಧ್ಯಮಗಳಲ್ಲಿ ಪ್ರವೀಣ್ ತೊಗಾಡಿಯಾ ಅವರ ಹೇಳಿಕೆಗಳು, ಮೊಸಳೆ ಕಣ್ಣೀರು ಚರ್ಚೆಯಾಗುತ್ತಿದೆಯೇ ಹೊರತು, ತೊಗಾಡಿಯಾ ಮತ್ತು ಅವರ ಕಾರ್ಯಕರ್ತರ ವೇಷದಲ್ಲಿರುವ ಗೂಂಡಾಗಳು ನಡೆಸುತ್ತಾ ಬಂದಿರುವ ಅಕ್ರಮಗಳು ಚರ್ಚೆಯಾಗುತ್ತಿಲ್ಲ. ತೊಗಾಡಿಯಾ ಬಂಧನಕ್ಕೆ ಕಾರಣವಾಗಿರುವ ರಾಜಕೀಯ ಸಂಗತಿಗಳಷ್ಟೇ ಮುನ್ನೆಲೆಗೆ ಬರುತ್ತಿವೆ.

ತೊಗಾಡಿಯಾ ಮತ್ತು ಮೋದಿಯ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಇಂದು ಪೊಲೀಸರು ಬೇಟೆಯಾಡಲು ಹೊರಟಿರುವ ತೊಗಾಡಿಯಾ ಅಮಾಯಕ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಪತ್ರಿಕಾಗೋಷ್ಠಿಯಲ್ಲಿ ತನ್ನ ಅಮಾಯಕತೆಯನ್ನು ತೊಗಾಡಿಯಾ ವಿವರಿಸಲು ವಿಫಲವಾಗಿದ್ದಾರೆ. ಮೋದಿಯ ಮೇಲೆ ಆರೋಪ ಮಾಡುವುದರಿಂದ ತೊಗಾಡಿಯಾ ಅವರು ನಿರ್ದೋಷಿಯಾಗುವುದಿಲ್ಲ. ಇಂದು ಮಾಧ್ಯಮಗಳಿಗೆ ತೊಗಾಡಿಯಾರನ್ನು ಬಿಜೆಪಿ ಮತ್ತು ಆರೆಸ್ಸೆಸ್ ಬಳಸಿ ಎಸೆದಿದೆ ಎನ್ನುವುದು ಮುಖ್ಯವಾಗಿದೆ.

ಇದೊಂದು ರೀತಿಯಲ್ಲಿ, ಮೋದಿಯನ್ನು ಹಣಿಯುವ ಭರದಲ್ಲಿ ‘ಅಡ್ವಾಣಿ’ಯ ಎಸಗಿರುವ ಕೃತ್ಯಗಳನ್ನು ಮಾಫಿ ಮಾಡಿದಂತೆಯೇ ಆಗಿದೆ. ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಡ್ವಾಣಿ ಮಾಡಿದ ತಪ್ಪಿಗಾಗಿ ಜೈಲು ಸೇರಲೇಬೇಕು. ಒಂದು ವೇಳೆ, ಮೋದಿಯ ರಾಜಕೀಯ ಅನಿವಾರ್ಯತೆಗಾಗಿ ಅಡ್ವಾಣಿ ಜೈಲು ಸೇರಿದರೂ ಅದು ಸ್ವಾಗತಾರ್ಹ. ಮೋದಿಯನ್ನು ಮುಂದಿಟ್ಟುಕೊಂಡು ಅಡ್ವಾಣಿಯ ಮೇಲೆ ಅನುಕಂಪ ತೋರಿಸುವುದು ಅಪಾಯಕಾರಿ. 90ರ ದಶಕದಲ್ಲಿ ಅಡ್ವಾಣಿ ರಥಯಾತ್ರೆಗೆ ಬಲಿಯಾದ ಅಮಾಯಕರನ್ನು ನಾವು ಯಾವ ಕಾರಣಕ್ಕೂ ಮರೆಯಬಾರದು. ಆದುದರಿಂದ, ಅಡ್ವಾಣಿ ಜೈಲು ಸೇರಿಸಿದರೆ ಅದನ್ನು ಸ್ವಾಗತಿಸುತ್ತಲೇ, ಅಡ್ವಾಣಿಯ ರಕ್ತಪಾತ ರಾಜಕಾರಣದ ಫಲಾನುಭವಿಯಾಗಿರುವ ನರೇಂದ್ರ ಮೋದಿಯ ಕಡೆಗೆ ಬೆಟ್ಟು ಮಾಡಬೇಕು. ಪ್ರವೀಣ್ ತೊಗಾಡಿಯಾ ತನ್ನನ್ನು ತಾನು ಹಿಂದೂ ನಾಯಕ ಎಂದು ಕರೆದುಕೊಳ್ಳುತ್ತಿದ್ದಾರೆ.

ಈ ದೇಶದಲ್ಲಿ ಸಹಸ್ರಾರು ಹಿಂದೂ ಅಧ್ಯಾತ್ಮವಾದಿಗಳು, ನಾಯಕರು ಆಗಿ ಹೋಗಿದ್ದಾರೆ. ಗಾಂಧೀಜಿ ಕೂಡ ಒಬ್ಬ ಹಿಂದೂ ನಾಯಕನೇ ಆಗಿದ್ದರು. ಅರವಿಂದಘೋಷ್, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಇವರೆಲ್ಲರನ್ನು ಹಿಂದೂ ಸಂಸ್ಕೃತಿಯ ವಕ್ತಾರರು ಎಂದು ಜನರು ಗುರುತಿಸಿಕೊಂಡು ಬಂದಿದ್ದಾರೆ. ಇಂದು ಹಿಂದೂ ಸಂಸ್ಕೃತಿ ವಿಶ್ವಾದ್ಯಂತ ಮಾನ್ಯತೆಯನ್ನು ಪಡೆದಿದ್ದರೆ ಇಂತಹ ಮಹನೀಯರ ಚಿಂತನೆಗಳ ಫಲದಿಂದಲೇ ಹೊರತು, ಮೈತುಂಬಾ ಕ್ರಿಮಿನಲ್ ಪ್ರಕರಣಗಳನ್ನು ಹೊತ್ತುಕೊಂಡು ತಿರುಗಾಡುತ್ತಿರುವ ತೊಗಾಡಿಯಾರಂಥವರಿಂದಲ್ಲ. ಹಿಂದೂ ಧರ್ಮವನ್ನು ತಮ್ಮ ಕ್ರಿಮಿನಲ್ ರಾಜಕೀಯಗಳಿಗೆ ಮುಖವಾಡವಾಗಿ ಬಳಸಿಕೊಂಡು ಆ ಧರ್ಮದ ಉದಾತ್ತ ಚಿಂತನೆಗಳನ್ನು ವಿರೂಪಗೊಳಿಸಿದವರು ತೊಗಾಡಿಯಾ. ಇಂತಹ ನಾಯಕರಿಂದಾಗಿ ರೌಡಿಗಳು, ಗೂಂಡಾಗಳು ಹಿಂದೂ ಧರ್ಮದ ರಕ್ಷಕರ ವೇಷದಲ್ಲಿ ಸ್ವತಂತ್ರವಾಗಿ ಓಡಾಡ ತೊಡಗಿದ್ದಾರೆ.

ಹಫ್ತಾ ವಸೂಲಿಯಂತಹ ಪಾತಕ ಕೃತ್ಯಗಳಿಗೆಲ್ಲ ಇವರು ಹಿಂದೂ ರಕ್ಷಣೆಯ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ತೊಗಾಡಿಯಾ ಸಂಘಪರಿವಾರವನ್ನು ಪ್ರತಿನಿಧಿಸುತ್ತಾರೆಯೇ ಹೊರತು, ಹಿಂದೂ ಧರ್ಮವನ್ನಲ್ಲ. ಇರುವಷ್ಟು ಕಾಲ ಇವರಿಂದಾಗಿ ಹಿಂದೂ ಧರ್ಮದ ಉದಾತ್ತ ಚಿಂತನೆಗಳಿಗೆ ಧಕ್ಕೆಯಾಗಿದೆಯೇ ಹೊರತು, ಒಳಿತಾಗಿಲ್ಲ. ಗುಜರಾತ್ ಹತ್ಯಾಕಾಂಡದಲ್ಲಿ ತೊಗಾಡಿಯಾ ಕೊಡುಗೆ ಏನು ಎನ್ನುವುದು ಜಗಜ್ಜಾಹೀರಾಗಿದೆ. ಬಾಯಿ ತೆರೆದರೆ ಕತ್ತರಿಸುತ್ತೇವೆ, ಕೊಲ್ಲುತ್ತೇವೆ ಎಂದು ಅರಚಾಡುತ್ತಿದ್ದ ಈ ನಾಯಕ ಎಂದೋ ಜೈಲು ಸೇರಬೇಕಾಗಿತ್ತು. ಇದೀಗ ಬಿಜೆಪಿ ಅಧಿಕಾರದಲ್ಲಿರುವ ರಾಜಸ್ಥಾನದ ಪೊಲೀಸರು ಈತನನ್ನು ಬಂಧಿಸಲು ಮುಂದಾಗಿದ್ದಾರೆ. ತೊಗಾಡಿಯಾರ ವೃದ್ಧಾಪ್ಯದ ಹೊತ್ತಿನಲ್ಲಾದರೂ ರಾಜಸ್ಥಾನದ ಪೊಲೀಸರು ಇಂತಹದೊಂದು ತೀರ್ಮಾನಕ್ಕೆ ಬಂದಿರುವುದು ದೇಶದ ಕಾನೂನು ವ್ಯವಸ್ಥೆ ಇನ್ನೂ ಸಣ್ಣದಾಗಿ ಉಸಿರಾಡುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ಬಂಧನದ ಹಿಂದಿರಬಹುದಾದರೂ, ತೊಗಾಡಿಯಾ ಅವರು ಬಂಧನಕ್ಕೆ ಅರ್ಹವಾದ ಪ್ರಕರಣಗಳನ್ನು ಹೊಂದಿದ್ದಾರೆ ಎನ್ನುವುದರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಆದುದರಿಂದ ನಾವು ಮೊದಲು ಚರ್ಚೆ ಮಾಡಬೇಕಾಗಿರುವುದು, ತೊಗಾಡಿಯಾ ಯಾವ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಅರ್ಹರಾಗಿದ್ದಾರೆಯೋ ಅದರ ಕುರಿತಂತೆ. ಯಾವ ಕಾರಣಕ್ಕೂ ತೊಗಾಡಿಯಾ ಬಂಧನ ವಿಷಯಾಂತರವಾಗಬಾರದು.

ತೊಗಾಡಿಯಾ ಮೇಲಿರುವ ಎಲ್ಲ ಪ್ರಕರಣಗಳೂ ಜೀವಪಡೆಯಬೇಕಾಗಿದೆ. ಅಷ್ಟೇ ಅಲ್ಲ, ಹಿಂದೂ ರಕ್ಷಣೆಯ ಹೆಸರಿನಲ್ಲಿ ಅವರು ಸಾಕಿರುವ ಗೂಂಡಾಗಳು ಎಸಗಿರುವ ಪ್ರಕರಣಗಳೂ ತನಿಖೆಗೊಳಪಡಬೇಕು. ‘ಎನ್‌ಕೌಂಟರ್’ ಮಾಡುವಂತಹ ಅಕ್ರಮವನ್ನು ಎಸಗಿಯೂ ತೊಗಾಡಿಯಾ ಬಹಿರಂಗವಾಗಿ ಪತ್ರಿಕಾಗೋಷ್ಠಿ ಮಾಡಬಲ್ಲರು ಎನ್ನುವುದೇ ಕಾನೂನಿನ ಒಂದು ಅಣಕ. ಆದುದರಿಂದ, ಇನ್ನೂ ಯಾಕೆ ತೊಗಾಡಿಯಾ ಅವರ ಬಂಧನವಾಗಿಲ್ಲ ಎನ್ನುವ ಪ್ರಶ್ನೆ ಮಾಧ್ಯಮಗಳಲ್ಲಿ ಚರ್ಚೆಯ ವಸ್ತುವಾಗಬೇಕು. ತೊಗಾಡಿಯಾ ಸಂಘಪರಿವಾರಕ್ಕೆ ಮಾತ್ರವಲ್ಲ, ಈ ದೇಶದ ಸಂವಿಧಾನಕ್ಕೆ ಭಾರವಾಗಿರುವವರು. ಅವರೆಂದೂ ಹಿಂದೂಗಳ ರಕ್ಷಣೆಗಾಗಿ ಹೋರಾಡಲಿಲ್ಲ. ತನ್ನ ರಾಜಕೀಯ ದುರುದ್ದೇಶಗಳಿಗಾಗಿ ಹಿಂದೂ ಧರ್ಮವನ್ನು ದುರ್ಬಳಕೆ ಮಾಡಿಕೊಂಡರು.

ಇಂತಹ ಕ್ರಿಮಿನಲ್ ನಾಯಕರಿಂದಾಗಿ ಹಿಂದೂಧರ್ಮ ಜಾಗತಿಕವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಮಾಡಿಕೊಂಡಿದೆ. ಆದುದರಿಂದ, ತಕ್ಷಣ ಅವರನ್ನು ಬಂಧಿಸಿ ಜೈಲಿಗೆ ತಳ್ಳುವ ಪ್ರಕ್ರಿಯೆಯ ಕುರಿತಂತೆ ಕೇಂದ್ರ ಸರಕಾರಕ್ಕೆ ಪ್ರಜ್ಞಾವಂತರು ಒತ್ತಡವನ್ನು ಹೇರಬೇಕು. ಇದೇ ಸಂದರ್ಭದಲ್ಲಿ ತೊಗಾಡಿಯಾಗೆ ಅನುಕಂಪ ಸೂಚಿಸಲು ತಾಮುಂದು, ನಾಮುಂದು ಎಂದು ಸ್ಪರ್ಧೆಗಿಳಿದಿರುವ ‘ಜಾತ್ಯತೀತ’ ಪಕ್ಷಗಳು ಈ ಮೂಲಕ ತಾವು ಯಾರನ್ನು ರಕ್ಷಿಸಲು ಮುಂದಾಗಿದ್ದಾರೆ ಎನ್ನುವುದರ ಕುರಿತಂತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ತೊಗಾಡಿಯಾ ಬಂಧನ, ಸಂಘಪರಿವಾರದ ಮೋಸದ ಮಾತುಗಳಿಗೆ ಬಲಿ ಬೀಳುವ ಹೊಸ ತಲೆಮಾರುಗಳಿಗೆ ಒಂದು ಪಾಠವಾಗಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News