ದಲಿತ ಸಂಘಟನೆಯ ಕಾರ್ಯಕರ್ತರನ್ನು ‘ನಾಯಿಗಳು’ ಎಂದ ಅನಂತ್ ಕುಮಾರ್ ಹೆಗಡೆ !

Update: 2018-01-20 14:52 GMT

ಬಳ್ಳಾರಿ, ಜ. 20: ‘ನಾವು ಹೇಳಿಕೇಳಿ ಹಠವಾದಿಗಳು, ಯಾವುದೋ ರಸ್ತೆಯಲ್ಲಿ ನಾಯಿಗಳು ಕೂಗಿದರೆ ತಾನು ಅದಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ತನ್ನ ಕಾರಿಗೆ ಮುತ್ತಿಗೆ ಹಾಕಿ, ಕಪ್ಪುಪಟ್ಟಿ ಪ್ರದರ್ಶಿಸಿದ ದಲಿತ ಸಂಘಟನೆಗಳ ಕಾರ್ಯಕರ್ತರನ್ನು ನಾಯಿಗಳಿಗೆ ಹೋಲಿಕೆ ಮಾಡುವ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ.

ಶನಿವಾರ ನಗರದಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ದೇಶಕೋಸ್ಕರ, ನಮ್ಮ ಯುವಕರ ಮೇಲೆ, ಈ ಮಣ್ಣಿನ ಮೇಲೆ, ನಮ್ಮ ಧರ್ಮದ ಮೇಲೆ ನಮಗೆ ನಂಬಿಕೆ ಇದೆ. ಅವರಿಗೆ ಶಕ್ತಿ ತುಂಬಿಸುವ ಕೆಲಸವನ್ನು ನಾವು ಮಾಡುತ್ತೇವೆ’ ಎಂದು ಹೇಳಿದರು.

ಕಪ್ಪುಪಟ್ಟಿ ಪ್ರದರ್ಶನ: ‘ಸಂವಿಧಾನ ಬದಲಾವಣೆ’ ಹೇಳಿಕೆ ಅನಂತಕುಮಾರ್ ಹೆಗಡೆ ಕ್ರಮವನ್ನು ಹೊಸಪೇಟೆಯ ದಲಿತ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ನಗರದ ಪ್ರವಾಸಿ ಮಂದಿರದ ಬಳಿ ಕಪ್ಪು ಪಟ್ಟಿ ಪ್ರದರ್ಶಿಸಿ, ಹೆಗಡೆ ಕಾರಿಗೆ ಮುತ್ತಿಗೆ ಹಾಕಿ ಧಿಕ್ಕಾರದ ಘೋಷಣೆ ಕೂಗಿದರು. ಈ ವೇಳೆ, ಸಂಸದ ಶ್ರೀರಾಮುಲು ಸಂಧಾನ ನಡೆಸಿ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಿಸಿದರೂ ಅದು ಫಲ ನೀಡಲಿಲ್ಲ.

ಅತ್ಯಂತ ಶ್ರೇಷ್ಠ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ಬದಲಾವಣೆ ಮಾಡುವ ಹೇಳಿಕೆ ನೀಡಿದ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯನ್ನು ಕೂಡಲೇ ಸಂಪುಟದಿಂದ ವಜಾ ಮಾಡಬೇಕು. ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಸಿಂಹದ ಮರಿಗಳು ನಾವು: ದಲಿತ ಸಂಘಟನೆಗಳ ಕಾರ್ಯಕರ್ತರನ್ನು ಶ್ವಾನಗಳಿಗೆ ಹೋಲಿಕೆ ಮಾಡಿದ ಅನಂತಕುಮಾರ್ ಹೆಗಡೆ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ‘ನಾವು ಸಿಂಹದ ಮರಿಗಳು’ ಎಂದು ಹೇಳಿದರು.

ಸಚಿವ ಅನಂತಕುಮಾರ್ ಹೆಗಡೆಯನ್ನು ಸಂಪುಟದಿಂದ ವಜಾಗೊಳಿಸಬೇಕು. ಇಲ್ಲವಾದರೆ ಅವರನ್ನು ರಾಜ್ಯದಲ್ಲಿ ಸಂಚರಿಸಲು ಅವಕಾಶ ನೀಡುವುದಿಲ್ಲ. ಕೂಡಲೇ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಆಗ್ರಹಿಸಿದರು.

ವ್ಯಾಪಕ ಆಕ್ರೋಶ: ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಕೆ ಮಾಡಿದ ಅನಂತಕುಮಾರ್ ಹೆಗಡೆ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದ ಜನತೆಯನ್ನು ಅನಂತಕುಮಾರ್ ಹೆಗಡೆ ಅವಮಾನಿಸಿದ್ದು, ಕೂಡಲೇ ಸಾರ್ವಜನಿಕ ಕ್ಷಮೆ ಕೋರಬೇಕೆಂಬ ಆಗ್ರಹವೂ ಕೇಳಿಬಂದಿದೆ.

‘ಹೆಗಡೆ ಮಾತು ಆರೆಸ್ಸೆಸಿನ ಮಾತು. ದೇಶವನ್ನು ಮೂರ್ಖರನ್ನಾಗಿಸಿ ಮತ ಪಡೆದು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರಕಾರ ಅಭಿವೃದ್ಧಿಯನ್ನು ಸಂಪೂರ್ಣ ನಿರ್ಲಕ್ಷಿಸಿ ಭಾವನಾತ್ಮಕ ವಿಚಾರಗಳ ಮೂಲಕ ಮತಗಳ ಕ್ರೋಡೀಕರಣಕ್ಕೆ ಹುನ್ನಾರ ನಡೆಸಿದ್ದಾರೆ. ರಾಜ್ಯದ ಜನರನ್ನು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಪಮಾನಿಸಿದ್ದು, ಪ್ರಧಾನಿ ಮೋದಿ ತಲೆ ತಗ್ಗಿಸಬೇಕು’
-ಕೆ.ನೀಲಾ ಪ್ರಗತಿಪರ ಚಿಂತಕಿ

‘ನಾಯಿ ಅಂದರೆ ನಾರಾಯಣಸ್ವಾಮಿ ದೂಷಣೆ ಮಾಡಿದಂತೆ. ಇದರಿಂದ ಅವರಿಗೆ ಧರ್ಮದ ಬಗ್ಗೆ ಎಷ್ಟು ನಂಬಿಕೆಯಿದೆ ಎಂಬುದು ಸ್ಪಷ್ಟವಾಗುತ್ತದೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಉದ್ದೇಶಪೂರ್ವಕವಾಗಿ ಹೀಗೆ ಮಾತನಾಡುತ್ತಿದ್ದು, ಜನತೆ ತಕ್ಕ ಉತ್ತರ ನೀಡಲಿದ್ದಾರೆ’
-ಮಾವಳ್ಳಿ ಶಂಕರ್ ದಸಂಸ ರಾಜ್ಯ ಪ್ರಧಾನ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News