ಬಣಕಲ್ ಸರಕಾರಿ ಆಸ್ಪತ್ರೆಯಲ್ಲಿ ಪಾನಮತ್ತ ವೈದ್ಯ: ಸ್ಥಳೀಯರ ಆರೋಪ

Update: 2018-01-20 12:17 GMT

ಮೂಡಿಗೆರೆ, ಜ. 20: ಇಲ್ಲೊಬ್ಬ ವೈದ್ಯ  ಮಹಾಶಯ ಕುಡಿದು ತೂರಾಡುತ್ತಲೇ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಕಾಣುತ್ತಿರುವ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ರೋಗಿಗಳು ಸರಕಾರಿ ಆಸ್ಪತ್ರೆಯ ವೈದ್ಯರನ್ನುನಂಬಿ ಚಿಕಿತ್ಸೆ ಪಡೆಯಲು ಬರುತ್ತಾರೆ. ಆದರೆ ಈ ವೈದ್ಯನಿಗೆ ಮಾತ್ರ ಹೇಳುವವರು ಇಲ್ಲ, ಕೇಳುವವರು ಇಲ್ಲದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಸರಕಾರಿ ಆಸ್ಪತ್ರೆಯ ವೈದ್ಯ ಕಂಠ ಪೂರ್ತಿ ಕುಡಿದು ಅವಾಂತರ ಮಾಡಿಕೊಂಡಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ಕೊಡುವುದನ್ನ ಬಿಟ್ಟು ಪ್ರತಿನಿತ್ಯವೂ ಪಾನಮತ್ತನಾಗಿ ರೋಗಿಗಳಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬಣಕಲ್ ಸರಕಾರಿ ಆಸ್ಪತ್ರೆ ವೈದ್ಯ ಡಾ. ರವಿ ಡ್ಯೂಟಿ ಟೈಮ್‌ನಲ್ಲಿ ಡ್ಯೂಟಿ ಮಾಡುವುದನ್ನು ಬಿಟ್ಟು ಕಂಠ ಪೂರ್ತಿ ಕುಡಿದು ರಸ್ತೆಯಲ್ಲಿ ಮಾಡಿಕೊಂಡಿರುವ ಅವಾಂತರವನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಣಕಲ್ ಕೊಟ್ಟಿಗೆಹಾರ ಸುತ್ತ ಮುತ್ತಲಿನ ಗ್ರಾಮಗಳ ಗ್ರಾಮಸ್ಥ ರಿಗೆ ಇರುವುದು ಬಣಕಲ್ ಸರಕಾರಿ ಆಸ್ಪತ್ರೆ ಮಾತ್ರ ಇದನ್ನೇ ನಂಬಿ ನಿತ್ಯವೂ ನೂರಾರು ಬಡ ರೋಗಿಗಳು ಚಿಕಿತ್ಸೆ ಪಡೆಯಲು ಬಂದರೆ ಸರಿಯಾದ ಚಿಕಿತ್ಸೆ ಸಿಗದೆ ಬೇಸತ್ತು ಹೋಗುತ್ತಿದ್ದಾರೆ. 

ಕಳೆದ 5 ತಿಂಗಳ ಹಿಂದೆ ಬಣಕಲ್ ಸರಕಾರಿ ಆಸ್ಪತ್ರೆಗೆ ವರ್ಗವಾಗಿ ಬಂದಿರುವ ಡಾ. ರವಿ ಮುಂಜಾನೆಯಿಂದ ರಾತ್ರಿಯವರೆಗೂ ಕುಡಿಯುವುದನ್ನುನಿತ್ಯವೂ ಕಾಯಕ ಮಾಡಿಕೊಂಡಿರುವ ಆರೋಪವಿದೆ. ಪಾನ ಮತ್ತನಾಗಿ ಆಸ್ಪತ್ರೆಗೆ ದಿನಿನಿತ್ಯ ಬರುತ್ತಾರೆ ಎಂದೂ ಸ್ಥಳೀಯರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಣಕಲ್ ನಗರದ ಅಂಗಡಿಗಳಿಗೆ ಹೊಗಿ ತೊಂದರೆ ನೀಡುತ್ತಿದ್ದು, ಡಾ. ರವಿಯ ಅವಾಂತರಗಳಿಂದ ರೋಗಿಗಳು, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಬಣಕಲ್ ಅಂಗಡಿಗಳ ಮಾಲಕರು ಬೇಸತ್ತು ಹೋಗಿದ್ದಾರೆ. ಆರೋಗ್ಯ ಸಚಿವರೆ ಒಮ್ಮೆ ಇತ್ತ ನೋಡಿ ಎಂದು ಜನತೆ ಕೇಳುತ್ತಿದ್ದು, ಬಣಕಲ್ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ನೀಡುವ ಕೆಲಸವಾಗಬೇಕಿದೆ.

ಅವರು ಕೋಲಾರದಿಂದ ವರ್ಗಾವಣೆ ಪಡೆದು ಬಂದಿರುವ ವೈದ್ಯರು. ಅಲ್ಲಿಂದ ಶಿಕ್ಷೆಯ ವರ್ಗಾವಣೆಯಾಗಿ ಬಣಕಲ್‌ಗೆ ಬಂದಿದ್ದಾರೆ. ಅವರು ಹಿಂದೆಯೂ ಇದೇ ರೀತಿ ವರ್ತಿಸುತಿದ್ದ ಬಗ್ಗೆ ದೂರುಗಳು ಕೇಳಿ ಬಂದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ನಿನ್ನೆ ಕೂಡ ಹೀಗೆಯೇ ಪಾನಮತ್ತರಾಗಿರುವ ಬಗ್ಗೆ ದೂರು ಬಂದಿದೆ. ಬಣಕಲ್ ಮೆಡಿಕಲ್ ಆಪೀಸರ್ ಇಕ್ಲಾಖ್ ಅಹ್ಮದ್ ಅವರಿಗೆ ಈ ಬಗ್ಗೆ ವರದಿ ನೀಡುವಂತೆ ಕೇಳಿದ್ದೇನೆ. ನಿನ್ನೆಯ ಸಂಬಳ ತಡೆ ಹಿಡಿಯಲು ಸೂಚಿಸಿದ್ದೇನೆ. ವೈಧ್ಯರ ವರ್ತನೆ ಹೀಗೆಯೇ ಮುಂದುವರಿದರೆ ಅವರು ಮಾನಸಿಕವಾಗಿ ಸರಿಯಾಗುವ ತನಕ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗುವುದು.

- ಡಾ. ಸುಂದರೇಶ್, ತಾಲೂಕು ವೈಧ್ಯಾಧಿಕಾರಿ, ಮೂಡಿಗೆರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News