ಸಮಾಜಕ್ಕೆ ವೇಮನ ನೀಡಿದ ಸಂದೇಶ ಅತ್ಯಮೂಲ್ಯ: ವಿನಯ ಕುಲಕರ್ಣಿ

Update: 2018-01-20 13:59 GMT

ಧಾರವಾಡ, ಜ.20: ಮಹಾಯೋಗಿ ವೇಮನರಂತಹ ಮಹಾತ್ಮರ ಜಯಂತಿಗಳ ಆಚರಣೆಯಿಂದ ಮಹಾನ್ ಸಾಧಕರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಅರಿತುಕೊಳ್ಳಬಹುದು. ಅದರಂತೆ ಅವರ ಹಾದಿಯಲ್ಲಿ ಎಲ್ಲರೂ ಜೀವನ ಸಾಗಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳುವತ್ತ ಎಲ್ಲರೂ ಮುನ್ನಡೆಯಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ.

ನಗರದ ಸರಸ್ವತಿಪುರದ ಶ್ರೆ ವೆಂಕಟೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಶ್ರೀ ಮಹಾಯೋಗಿ ವೇಮನ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮಾಜದವರು ಬೇರೆ ಬೇರೆ ಸಾಧಕರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಯುವಕರು ಸಾಧಕರ ವಿಚಾರ, ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಎಲ್ಲ ಸಮಾಜದವರು ಬೇರೆ ಬೇರೆ ಸಮಾಜದವರೊಂದಿಗೆ ಸಹಕಾರ, ಸಹಬಾಳ್ವೆಯಿಂದ ಬೆರೆತು ನಡೆಯಬೇಕು. ಜಯಂತಿಗಳ ಆಚರಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿ, ಯಶಸ್ವಿಗೊಳಿಸಲು ಅಣಿಯಾಗಬೇಕು ಎಂದು ಅವರು ಹೇಳಿದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮಹಾಯೋಗಿ ವೇಮನ ಯಾವುದೇ ಫಲಾಪೇಕ್ಷೆಯಿಲ್ಲದೆ ಜೀವನ ಸಾಗಿಸಿದವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು. ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸದಾನಂದ ಡಂಗನವರ, ಜಿ.ಪಂ.ಉಪಕಾರ್ಯದರ್ಶಿ ಎಸ್.ಜಿ.ಕೊರವರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ ಕೋನರಡ್ಡಿ, ಶೈಲಜಾ ಕಾಮರಡ್ಡಿ, ಸುಜಾತಾ ಕಾಲವಾಡ, ದೀಪಕ್ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News