ಸತತ 9 ಗಂಟೆಗಳ ಕಾರ್ಯಾಚರಣೆ: ಮನೆಯಲ್ಲಿದ್ದ ಚಿರತೆಯ ಸೆರೆ

Update: 2018-01-20 14:30 GMT

ತುಮಕೂರು, ಜ.20: ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ವೇಳೆ ಗಾಬರಿಗೊಂಡು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನು ಗಾಯಗೊಳಿಸಿ, ನಂತರ ಮನೆಯೊಂದರಲ್ಲಿ ಅಡಗಿ ಕುಳಿತ ಚಿರತೆಯನ್ನು ಸತತ 9 ಗಂಟೆಗಳ ಕಾಲ ಅರಣ್ಯ, ಪೊಲೀಸ್ ಹಾಗೂ ಪಶುವೈದ್ಯರು ನಡೆಸಿದ ಜಂಟಿ ಕಾರ್ಯಾಚರಣೆ ಮೂಲಕ ಸೆರೆ ಹಿಡಿದ್ದು, ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸಲಾಗಿದೆ.

ಜಯನಗರ ಪಶ್ಚಿಮದ ರಂಗನಾಥ್ ಎಂಬುವವರ ಮನೆಯಲ್ಲಿ ಚಿರತೆ ಅಡಗಿತ್ತು ಎನ್ನಲಾಗಿದ್ದು, ಮನೆಯ ಬಾಗಿಲ ಬಳಿ ಚಿರತೆ ಬಂದಿದ್ದನ್ನು ಗಮನಿಸಿದ ರಂಗನಾಥ ಎಂಬವರ ಸೊಸೆ ವಿನುತಾ, ತನ್ನ ಅತ್ತೆ ವನಜಾಕ್ಷಿಯೊಂದಿಗೆ ಬಚ್ಚಲು ಮನೆ ಸೇರಿದ್ದರು.

ಶನಿವಾರ ಬೆಳಗ್ಗೆ 9:30ರ ಸುಮಾರಿಗೆ ಚಿರತೆಯು, ರಂಗನಾಥ ಅವರ ಮನೆ ಇರುವ ರಸ್ತೆಯಲ್ಲಿ ಹೋಗುವುದನ್ನು ಎದುರು ಮನೆಯವರು ಮಾಡಿರುವ ವಿಡಿಯೋದಲ್ಲಿ ಸೆರೆ ಸಿಕ್ಕಿದೆ. ಬೆಳಗ್ಗೆ ರಂಗನಾಥ್ ಅಂಗಡಿಯಿಂದ ಮನೆಗೆ ಬರುವ ವೇಳೆ ಚಿರತೆ ಬಾಗಿಲ ಬಳಿ ಇರುವುದನ್ನು ಕಂಡು ಒಳಗೆ ಇದ್ದ ಸೊಸೆಗೆ ತಿಳಿಸಿದ್ದು, ನಂತರ ಸೊಸೆ ವಿನುತಾ, ಅತ್ತೆ ವನಜಾಕ್ಷಿ ಅವರೊಂದಿಗೆ ಬಚ್ಚಲು ಮನೆ ಒಳಗೆ ಸೇರಿ ಬಾಗಿಲು ಹಾಕಿಕೊಂಡಿದ್ದರು. ರಂಗನಾಥ್ ಹೊರಗಡೆಯಿಂದ ಮನೆಯ ಬಾಗಿಲು ಹಾಕಿ ಭದ್ರಪಡಿಸಿದ್ದರು.

ವಿಷಯ ತಿಳಿದು ಶಾಸಕ ಡಾ.ರಫೀಕ್ ಅಹಮದ್, ಜಿಲ್ಲಾಧಿಕಾರಿ ಕೆ.ಪಿ.ಮೋಹನ್ ರಾಜ್ ಮತ್ತು ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅರಣ್ಯ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಚಿರತೆ ಹಿಡಿಯಲು ಕ್ಯೂಂಬಿಂಗ್ ಆರಂಭಿಸಿದ್ದರು.

ಕಿಟಕಿ ಮೂಲಕ ಹೊರಗೆ ಕರೆತಂದ ಪೊಲೀಸರು: ಚಿರತೆ ಮನೆಗೆ ನುಗ್ಗಿರುವುದರಿಂದ ಬಚ್ಚಲು ಮನೆಗೆ ಸೇರಿದ್ದ ಅತ್ತೆ ವನಜಾಕ್ಷಿ ಮತ್ತು ಸೊಸೆ ವಿನುತಾ ಅವರನ್ನು ಯಾವುದೇ ಪ್ರಾಣಾಪಾಯವಿಲ್ಲದೆ, ಬಚ್ಚಲು ಮನೆಯ ಕಿಟಕಿಯ ಗೋಡೆ ಒಡೆಯುವ ಮೂಲಕ ಹೊರಗೆ ಕರೆ ತಂದರು.

ನಂತರ ಚಿರತೆಯ ಸೆರೆಗೆ ಕಾರ್ಯಾಚರಣೆಗಿಳಿದ ಅಧಿಕಾರಿಗಳು, ಅರವಳಿಕೆ ತಜ್ಞರಾದ ಡಾ.ಸೃಜನ್, ಡಾ.ನಿಖಿತಾ ಹಾಗೂ ಡಾ.ಮುರುಳಿ ,ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಅತ್ತೆ, ಸೊಸೆಯನ್ನು ಹೊರತರಲಾಗಿದ್ದ ಕಿಟಕಿಯಿಂದಲೇ ಆರ್.ಎಫ್.ಓ ಮಹೇಶ್ ಅವರೊಂದಿಗೆ 6 ಮಂದಿ ಸಿಬ್ಬಂದಿಗಳ ತಂಡ ಮನೆಯ ಒಳಗೆ ಪ್ರವೇಶಿಸಿದೆ. ನಂತರ ಚಿರತೆ ಅಡುಗೆ ಮನೆಯಲ್ಲಿ ಅವಿತಿರುವುದನ್ನು ಖಚಿತ ಪಡಿಸಿಕೊಂಡ ಸಿಬ್ಬಂದಿಗಳು ಚಿರತೆಗೆ ಅರೆವಳಿಕೆ ಮದ್ದು ನೀಡಿದ್ದಾರೆ.  ಅರವಳಿಕೆ ಮದ್ದು ನೀಡಿದ ಸುಮಾರು 25 ನಿಮಿಷಗಳ ನಂತರ ಅಡುಗೆ ಮನೆಯ ಬಾಗಿಲಿಗೆ ಕಿಂಡಿ ಕೊರೆದು ಚಿರತೆ ಪ್ರಜ್ಞೆ ತಪ್ಪಿರುವುದನ್ನು ಖಚಿತ ಪಡಿಸಿ, ಅರಣ್ಯ ಸಿಬ್ಬಂದಿ ಬಲೆಯಲ್ಲಿ ಚಿರತೆಯನ್ನು ಬಂಧಿಸಿ ಬನ್ನೇರುಘಟ್ಟದ ಜೈವಿಕ ಅರಣ್ಯ ಉದ್ಯಾನವನಕ್ಕೆ ರವಾನಿಸಿದರು.

ಸ್ಥಳದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ರಾಮಲಿಂಗೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್,ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೋಭಾ ರಾಣಿ,ಡಿವೈಎಸ್.ಪಿ ನಾಗರಾಜು ಇನ್ನಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News