×
Ad

ಮಂಡ್ಯ: 3 ನೆ ದಿನಕ್ಕೆ ಕಾಲಿಟ್ಟ 'ಸ್ವಂತ ಮನೆ ನಮ್ಮ ಹಕ್ಕು' ಸಮಿತಿ ಧರಣಿ

Update: 2018-01-20 21:09 IST

ಮಂಡ್ಯ, ಜ.20: ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರಕಾರಿ ಭೂಮಿಯಲ್ಲಿ ವಾಸಿಸುತ್ತಿರುವ ಬಡವರಿಗೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಸ್ವಂತ ಮನೆ ನಮ್ಮ ಹಕ್ಕು ಹೋರಾಟ ಸಮಿತಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟವಧಿ ಪ್ರತಿಭಟನಾ ಧರಣಿ ಶನಿವಾರ 3 ನೆ ದಿನಕ್ಕೆ ಕಾಲಿರಿಸಿದೆ. 

ಕಳೆದ ಕೆಲ ದಿನಗಳ ಹಿಂದೆ ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಬೆಂಕಿ ಅನಾಹುತಕ್ಕೀಡಾಗಿ ಮನೆಗಳನ್ನು ಕಳೆದುಕೊಂಡ ತಮಿಳು ಕಾಲನಿ ನಿರಾಶ್ರಿತರು ಹಾಗೂ ಈಚಗೆರೆ ಗ್ರಾಮಸ್ಥರು  ಧರಣಿಯಲ್ಲಿ ಪಾಲ್ಗೊಂಡಿದ್ದರು.

ಕೀಲಾರ ಗ್ರಾಮ ಪಂಚಾಯತ್ ಅಧ್ಯಕ್ಷ ರಮೇಶ್, ಸದಸ್ಯರಾದ ಶಶಿಕಲಾ, ಸೋಮಶೇಖರ್ ಧರಣಿಗೆ ಬೆಂಬಲ ನೀಡಿದರು. ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣ ಗೌಡ, ಅಭಿಗೌಡ, ನಾಗರಾಜು, ಶೇಖರ, ಮುರುಗ ಶಿವಕುಮಾರ್ ಆನೆಕೆರೆ ಬೀದಿ ಚಂದ್ರು, ಇತರರು ಇದ್ದರು.

ಗ್ರಾ.ಪಂ ನಿರ್ಣಯ: ಸ್ವಂತಮನೆ ನಮ್ಮಹಕ್ಕು ಹೋರಾಟ ಸಮಿತಿಯ ಧರಣಿ ಹಿನ್ನೆಲೆಯಲ್ಲಿ ಇಂದು ಕೀಲಾರ ಗ್ರಾಮ ಪಂಚಾಯತ್ ಸಭೆ ಸೇರಿ ಬೆಂಕಿ ಅನಾಹುತಕ್ಕೀಡಾದ ಕುಟುಂಬಗಳಿಗೆ ನಿವೇಶನ ಒದಗಿಸಲು ನಿರ್ಣಯ ಕೈಗೊಂಡಿತು.

ಶಾಶ್ವತ ಸೂರು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮನೆಗಳನ್ನು ನಿರ್ಮಿಸಲು ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಗುರುತಿಸುವಂತೆ ತಹಶೀಲ್ದಾರರಿಗೆ ಪತ್ರ ಬರೆಯಲು ತೀರ್ಮಾನಿಸಿತು. ಒಂದು ವೇಳೆ ಸರಕಾರಿ ಭೂಮಿ ಲಭ್ಯವಿಲ್ಲದಿದ್ದಲ್ಲಿ ಸರ್ವೇ ನಂ.263 ರಲ್ಲಿರುವ ಪೂಲ್ ಖರಾಬ್ ಜಮೀನನ್ನು ಈ ಕುಟುಂಬಗಳಿಗೆ ನೀಡಿದರೆ ಗ್ರಾ.ಪಂ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಸಭೆಯು ತೀರ್ಮಾನಿಸಿದೆ.

ಬೆಂಕಿಗಾಹುತಿಯಾಗಿ ಮನೆ ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದು ಸದ್ಯ ಕುಟುಂಬಗಳ ಜೀವನ ನಿರ್ವಹಣೆಗಾಗಿ ಶೇ.24.1ರ ನಿಧಿಯಲ್ಲಿ ತಲಾ ಕುಟುಂಬಗಳಿಗೆ 4000 ರೂ. ಪರಿಹಾರ ಒದಗಿಸಲು ಸಭೆಯು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News