ಕಾರ್ಖಾನೆಯಲ್ಲಿ ಅಗ್ನಿ ಅನಾಹುತ: ಸಾವಿನ ಸಂಖ್ಯೆ 17ಕ್ಕೇರಿಕೆ

Update: 2018-01-21 04:02 GMT

ಹೊಸದಿಲ್ಲಿ, ಜ.20: ಇಲ್ಲಿನ ಬವಾನಾ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 17 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ 10 ಮಹಿಳೆಯರು ಸೇರಿದ್ದಾರೆ.

ಘಟನೆ ಸಂಭವಿಸಿದಾಗ ಮೊದಲ ಹಾಗೂ ಎರಡನೇ ಮಹಡಿಯಲ್ಲಿದ್ದ ಕಾರ್ಮಿಕರು ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಕ್ಕಿಹಾಕಿಕೊಂಡರು ಎನ್ನಲಾಗಿದೆ. ಪಟಾಕಿ ಕಾರ್ಖಾನೆಯಲ್ಲಿ ದುರಂತ ಸಂಭವಿಸಿದ್ದು, ಎರಡನೇ ಮಹಡಿಯಲ್ಲಿ ರಬ್ಬರ್ ಫ್ಯಾಕ್ಟರಿ ಇದ್ದುದು ಸಾವು ನೋವು ಹೆಚ್ಚಳಕ್ಕೆ ಕಾರಣವಾಗಿದೆ.

ಗಾಯಾಳುಗಳು ಮಹರ್ಷಿ ವಾಲ್ಮೀಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೂಪ್ ಪ್ರಕಾಶ್ (24) ಹಾಗೂ ಸುನಿತಾ (45) ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನ್, ವಿಜಯ್ ಗೋಯಲ್, ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಸ್ಥಳಕ್ಕೆ ಧಾವಿಸಿದ್ದಾರೆ. ಮೃತರ ಕುಟುಂಬಕ್ಕೆ ಐದು ಲಕ್ಷ ಹಾಗೂ ಗಾಯಗೊಂಡವರಿಗೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.

ತಡರಾತ್ರಿ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿದ್ದು, ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಪಟಾಕಿ ದಾಸ್ತಾನು ಗೋದಾಮಿನಲ್ಲಿ ಈ ದುರಂತ ಸಂಭವಿಸಿದ್ದು, ಗಾಯಾಳುಗಳಿಗೆ ಎಐಐಎಂಎಸ್ ಹಾಗೂ ಸಪ್ಧರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಘಟನೆಗೆ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News