ಹನೂರು: ಗೊಂದಲಕ್ಕೀಡಾದ ಪರಿವರ್ತನಾ ಯಾತ್ರೆಯ ಫ್ಲೆಕ್ಸ್
ಹನೂರು,ಜ.20: ಪಟ್ಟಣದಲ್ಲಿ ಶನಿವಾರ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಪರಿವರ್ತನಾ ಯಾತ್ರೆ ಫ್ಲೆಕ್ಸ್ ರಾಜಕೀಯಕ್ಕೆ ಸಾಕ್ಷಿಯಾಗಿದ್ದು, ವೇದಿಕೆಯ ಮುಂಭಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹನೂರು ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡರುಗಳು ಕಾರ್ಯಕರ್ತರ ಜೊತೆ ಭಾವಚಿತ್ರ ಗಳಿದ್ದ ಫ್ಲೆಕ್‍ಗಳನ್ನು ಹಾಕಿಸಿಕೊಂಡಿದ್ದರು. ಆದರೆ ಮೊದಲೇ ಒಡೆದ ಮನೆಯಂತಾಗಿದ್ದ ಬಿಜೆಪಿಯ ನಾಯಕರುಗಳ ಬೆಂಬಲಿತರು ರಂಪಾಟ ನಡೆಸಿದ್ದಾರೆ.
150ಕ್ಕೂ ಹೆಚ್ಚು ಫ್ಲೆಕ್‍ಗಳಿಗೆ ಬ್ಲೇಡ್: ಹನೂರು ಕ್ಷೇತ್ರದಿಂದ ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಟಿಕೆಟ್ ದೊರಕುತ್ತದೆಂಬ ಆಶಯದೊಂದಿಗೆ ಕಳೆದ ಆರು ತಿಂಗಳುಗಳಿಂದ ಕ್ಷೇತ್ರದಾದ್ಯಂದ ಸುತ್ತಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ರಾಜ್ಯ ಹಿಂದುಳಿದ ವರ್ಗಗಳ ಕಾರ್ಯಕಾರಿ ಸಮಿತಿಯ ಆರ್.ಮಂಜುನಾಥ್ ದೊಡ್ಡಿಂದುವಾಡಿ ಗ್ರಾಮದಿಂದ ಪರಿವರ್ತನಾ ರ್ಯಾಲಿ ಕಾರ್ಯಕ್ರಮದ ಸ್ಥಳದವರೆಗೂ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ಈ ಪೈಕಿ ಆರ್.ಎಸ್.ದೊಡ್ಡಿ ಗ್ರಾಮದವರೆಗೆ ಹಾಕಲಾಗಿರುವ ಕೆಲ ಫ್ಲೆಕ್ಸ್ ಗಳಿಗೆ ಮಂಜುನಾಥ್ ಅವರ ಮುಖದ ಭಾಗಕ್ಕೆ ಬ್ಲೇಡ್‍ಗಳ ಮೂಲಕ ಹಾನಿ ಮಾಡಲಾಗಿತ್ತು. ಇನ್ನು ಕೆಲವು ಕಡೆ ಅವರು ಹಾಕಿದ್ದ ಫ್ಲೆಕ್ಸ್ ಗಳೇ ಮಾಯವಾಗಿದ್ದವು. ಇದನ್ನು ಗಮನಿಸಿದ ಮಂಜುನಾಥ್ ಮತ್ತು ಅವರ ಬೆಂಬಲಿಗರು ಮರು ಮಾತನಾಡದೇ ಮೌನಕ್ಕೆ ಶರಣಾಗಿದ್ದರು. ಇನ್ನು ಮತ್ತೋರ್ವ ಓಬಿಸಿ ಮುಖಂಡರಾದ ರಾಮಚಂದ್ರು7 ಅವರ ಫ್ಲೆಕ್ಸ್ ಗಳಿಗೂ ಕೆಲ ಕಡೆ ಹಾನಿಮಾಡಲಾಗಿದ್ದು, ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ಹಾಕಿಸಿದ್ದ ಕೆಲ ಫ್ಲೆಕ್ಸ್ ಗಳಿಗೂ ಹಾನಿಯುಂಟಾಗಿದ್ದವು. ಈ ಬಗ್ಗೆ ಮುಖಂಡರುಗಳ ಕೆಲ ಕಾರ್ಯಕರ್ತರು ಅಪಸ್ವರ ಎತ್ತಿದರೂ ಏನೂ ಆಗದ ರೀತಿಯಲ್ಲಿಯೇ ಮುಖಂಡರು ಸುಮ್ಮನಿದ್ದರು.
ವೇದಿಕೆ ಮುಂಭಾಗದ ಫ್ಲೆಕ್ಸ್ ತೆಗೆಸಿ: ಪರಿವರ್ತನಾ ಯಾತ್ರೆಯ ವೇದಿಕೆ ಕಾರ್ಯಕ್ರಮದ ಮುಂಭಾಗದ ಸ್ಥಳದಲ್ಲಿ ಮುಖಂಡರಾದ ಮಂಜುನಾಥ್ ಸುಮಾರು 20 ಅಡಿ ಉದ್ದದ ದೊಡ್ಡ ಫ್ಲೆಕ್ಸ್ ಅನ್ನು ಅಳವಡಿಸಿದ್ದರು. ಈ ವೇಳೆ ಮಧ್ಯಾಹ್ನ 3 ಗಂಟೆ ವೇಳೆಗೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ನಾಗಪ್ಪರ ಪುತ್ರ ಪ್ರೀತನ್ ಅವರು ಫ್ಲೆಕ್ಸ್ ಅನ್ನು ಗಮನಿಸಿ, ಈ ಒಂದು ಫ್ಲೆಕ್ಸ್ ಮಾತ್ರ ವೇದಿಕೆ ಮುಂಭಾಗವೇಕೆ ಎಂದು ಪ್ರಶ್ನಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವೇದಿಕೆಯ ಮುಂಭಾಗದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತಾದರೂ ಬಳಿಕ ಪರಿಸ್ಥಿತಿ ತಿಳಿಯಾಯಿತು.
ಕಾರ್ಯಕ್ರಮದಿಂದ ಹೊರಗುಳಿದ ಪ್ರಮುಖ ನಾಯಕರು: ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡು ಒಗ್ಗಟ್ಟಿನ ಮಂತ್ರ ಜಪಿಸಬೇಕಾದ ಬಿಜೆಪಿಯ ಮುಖಂಡರುಗಳ ಪೈಕಿ ಪ್ರಮುಖ ನಾಯಕರೇ ಕಾರ್ಯಕ್ರಮದಿಂದ ಹೊರಗುಳಿದಿದ್ದರು. ಈ ಪೈಕಿ ಮಾಜಿ ಸಚಿವ ಸೋಮಣ್ಣ ಮತ್ತು ಅವರ ಬಣದ ಮುಖಂಡರಾದ ದತ್ತೇಶ್‍ಕುಮಾರ್, ಜಿ.ಪಂ ಮಾಜಿ ಅಧ್ಯಕ್ಷ ನಟರಾಜುಗೌಡ ಕಾರ್ಯಕ್ರಮದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಇನ್ನು ಸಮಾವೇಶಕ್ಕೆ ಸಂಬಂಧಿಸಿದ ಕೆಲ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಸಿ.ಎಂ.ರಾಜೇಂದ್ರ ಕುಮಾರ್ ಕಾರ್ಯಕ್ರಮದ 2 ದಿನಗಳ ಹಿಂದಿನಿಂದ ಅತ್ತ ತಲೆಯನ್ನೂ ಹಾಕಲಿಲ್ಲ. ಇನ್ನುಳಿದಂತೆ ಕೆಲ ಮೂಲ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸೋಮಣ್ಣ ಬೆಂಬಲಿಗರು, ರಾಜೇಂದ್ರ ಕುಮಾರ್ ಬೆಂಬಲಿತ ಮುಖಂಡರು ಮತ್ತು ಕಾರ್ಯಕರ್ತರು ಸಂಪೂರ್ಣವಾಗಿ ಕಾರ್ಯಕ್ರಮದಿಂದ ಹೊರಗುಳಿದಿದ್ದರು ಎನ್ನಲಾಗಿದೆ.