ಪ್ರವಾದಿ ಸಂದೇಶ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಣೆ: ಪಿಎಫ್‍ಐ ಖಂಡನೆ

Update: 2018-01-20 17:13 GMT

ಚಿಕ್ಕಮಗಳೂರು, ಜ.20: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪ ವಲಯದ ವತಿಯಿಂದ ಜ.19 ರಂದು ಹಮ್ಮಿಕೊಂಡಿದ್ದ ಪ್ರವಾದಿ ಸಂದೇಶ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡದಿರುವುದು ಖಂಡನೀಯ ಎಂದು ಸಂಘಟನೆಯ ಜಿಲ್ಲಾ ಸಮಿತಿಯ ಸದಸ್ಯ ಎ.ಕೆ ಅಶ್ರಫ್ ಹೇಳಿದರು.

ಅವರು ನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮ ನಡೆಸುವ 10 ದಿನದ ಮೊದಲೇ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕೊಪ್ಪ ನಗರ ಪಂಚಾಯತ್ ವತಿಯಿಂದ ಅನುಮತಿ ಪಡೆದು ಪ್ರಚಾರ ಕಾರ್ಯಕೈಗೊಳ್ಳಲಾಗಿತ್ತು. ಪೋಲೀಸ್ ಇಲಾಖೆ 4 ದಿನಗಳ ಮೊದಲೇ ಕಾರ್ಯಕ್ರಮದ ಪ್ರಚಾರಕ್ಕೆ ಅನುಮತಿ ನೀಡಿ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡದಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ತಿಳಿಸಿದರು.

ಅನುಮತಿ ಪಡೆದು ಪ್ರಚಾರ ಮಾಡುತ್ತಿದ್ದ ವಾಹನ ಚಾಲಕನನ್ನು ತಡೆದು ಅಕ್ರಮ ಬಂಧನದಲ್ಲಿರಿಸಿ ಕಾನೂನು ಉಲ್ಲಂಘಿಸಿದ್ದಾರೆ. ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸುವ ಮೂಲಕ ಪೋಲೀಸರು ಮುಸ್ಲಿಂ ವಿರೋಧಿ ನೀತಿಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಸಂಘ ಪರಿವಾರದವರು ಸಮಾವೇಶಗಳನ್ನು ನಡೆಸಿ ನಿರಂತರವಾಗಿ ಪ್ರಚೋದನಾತ್ಮಕ ಭಾಷಣಗಳನ್ನು ಮಾಡುತ್ತಿದ್ದರೂ ಅವರನ್ನು ತಡೆಯದ ಪೋಲೀಸರು ನಮ್ಮ ಕಾರ್ಯಕ್ರಮವನ್ನು ತಡೆಯುವುದರ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ನುಡಿದರು.

ಗೋಷ್ಠಿಯಲ್ಲಿ ವಲಯ ಅಧ್ಯಕ್ಷ ಜಮೀರ್, ಅಮ್ಜದ್‍ಖಾನ್, ವಾಸೀಂದಿಲ್ವಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News