×
Ad

ಅಣ್ಣ, ಅತ್ತಿಗೆಗೆ ಅಂಬಲಿಯಲ್ಲಿ ವಿಷ: ಅಣ್ಣ ಮೃತ್ಯು, ತಮ್ಮನ ಸೆರೆ

Update: 2018-01-20 22:54 IST

ಮೂಡಿಗೆರೆ, ಜ.20: ಆಸ್ತಿ ಸಂಬಂಧ ಒಡ ಹುಟ್ಟಿದ ಅಣ್ಣ ಮತ್ತು ಅತ್ತಿಗೆಯನ್ನು ಅಂಬಲಿಗೆ ವಿಷ ಬೆರೆಸಿ ತಿನ್ನುವಂತೆ ಮಾಡಿ ಕೊಲೆಗೈದಿರುವ ಹೃದಯ ವಿದ್ರಾಹಕ ಘಟನೆ ಗೋಣಿಬೀಡು ಪೊಲೀಸ್ ಠಾಣೆ ವ್ಯಾಪ್ತಿಯ ಕಣಚೂರು ಎಂಬಲ್ಲಿ ನಡೆದಿದೆ.

ಕಣಚೂರು ಗ್ರಾಮದ ಮೋಟೇಗೌಡ ಎಂಬವರ ಪುತ್ರ ವೆಂಕಟೇಶ(44) ತಮ್ಮನಿಂದಲೇ ಹತ್ಯೆಗೀಡಾಗಿರುವ ವ್ಯಕ್ತಿ. ವೆಂಕಟೇಶ್ ಮತ್ತು ತಮ್ಮ ದಿನೇಶ ಒಂದೇ ಮನೆಯಲ್ಲಿ ವಾಸವಿದ್ದರು. ಮೋಟೇಗೌಡರಿಗೆ ಸ್ವಲ್ಪ ಆಸ್ತಿ ಇದ್ದು, ಅಣ್ಣ ತಮ್ಮಂದಿರಲ್ಲಿ ಆಸ್ತಿ ವಿಚಾರದಲ್ಲಿ ಅಸಮಾಧಾನ ಇತ್ತು ಎನ್ನಲಾಗಿದೆ. ಈ ಸಂಬಂಧ ಆಸ್ತಿಯನ್ನು ತಾನೇ ಲಪಟಾಯಿಸಲು ತಮ್ಮ ಹೊಂಚು ಹಾಕಿ ಅಣ್ಣ ಮತ್ತು ಅತ್ತಿಗೆ ಇಬ್ಬರಿಗೂ ಅಂಬಲಿಯಲ್ಲಿ ವಿಷ ಬೆರೆಸಿ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಜ.12ರಂದು ಶುಕ್ರವಾರ ವೆಂಕಟೇಶ ಮತ್ತು ಪತ್ನಿ ರುಕ್ಮಿಣಿ ಮನೆಯೊಳಗೆ ಅಡುಗೆ ಸಹಿತ ಅಂಬಲಿಯನ್ನು ಮಾಡಿಟ್ಟು ತೋಟದ ಕಡೆಗೆ ಹೋಗಿದ್ದರು. ಬಂದು ಅದೇ ಊಟ ಮಾಡಿ ಅಂಬಲಿಯನ್ನು ಕುಡಿದಿದ್ದರು. ಇದಾದ ಕೆಲವೇ ತಾಸಿನಲ್ಲಿ ರುಕ್ಮಿಣಿ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ವೆಂಕಟೇಶ್ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ದಾಖಲಿಸಿದ್ದರು.

ಆಸ್ಪತ್ರೆಯಲ್ಲಿದ್ದಂತೆ ವೆಂಕಟೇಶ್ ಕೂಡ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು,ಬಳಿಕ ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ವಿಷ ಬೆರೆಸಿದ ಆಹಾರ ತಿಂದಿರುವ ಬಗ್ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡ ದಿನದ ಆಹಾರ ಸೇವನೆಯ ವಿವರವನ್ನು ವೆಂಕಟೇಶ್ ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಗೋಣಿಬೀಡು ಪೊಲೀಸರು ತಮ್ಮ ದಿನೇಶನನ್ನು ಗುರುವಾರ ಜ.18ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಅಂಬಲಿಯಲ್ಲಿ ವಿಷ ಬೆರೆಸಿ ಅಣ್ಣನನ್ನು ಕೊಲೆ ಮಾಡಲು ಪ್ರಯತ್ನಿಸಿರುವುದನ್ನು ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಅಸ್ವಸ್ಥರಾಗಿದ್ದ ವೆಂಕಟೇಶ್ ಮತ್ತು ರುಕ್ಮಿಣಿಯವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಜ.19ರಂದು ವೆಂಕಟೇಶ್ ಮೃತಪಟ್ಟಿದ್ದಾರೆ. ಪತ್ನಿ ರುಕ್ಮಿಣಿಯವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಕುರಿತು ಗೋಣೊಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ದಿನೇಶನನ್ನು ಪೊಲೀಸರು ಬಂಧಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News