ಭ್ರಷ್ಟಾಚಾರ ಮುಕ್ತ ದೇಶಕ್ಕಾಗಿ ನಿಷ್ಠಾವಂತ ವ್ಯಕ್ತಿಗೆ ಮತದಾನ ಮಾಡಿ: ಜಸ್ಟೀನ್ ಅರಳಿ ನಾಗರಾಜ್

Update: 2018-01-20 18:08 GMT

ದಾವಣಗೆರೆ,ಜ20: ಭ್ರಷ್ಟಾಚಾರ ಮುಕ್ತ ದೇಶವಾಗುವುದಕ್ಕೆ ಮತದಾರರು ಸರಿಯಾದ ನಿರ್ಧಾರದ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಮುಂದಾಗಬೇಕು. ಆಗ ಮಾತ್ರ ಭ್ರಷ್ಟಾಚಾರ ನಿಯಂತ್ರಣಗೊಳ್ಳುವುದಕ್ಕೆ ಸಾಧ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಜಸ್ಟೀನ್ ಅರಳಿ ನಾಗರಾಜ್ ಗಂಗಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಭ್ರಷ್ಟಾಚಾರ ಮುಕ್ತ ಸಮಾಜದ ಕಡೆಗೆ ನಡೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಬದಾವಣೆಯಾಗಬೇಕಾದರೆ ಮತದಾರರಿಂದ ಮಾತ್ರ ಸಾಧ್ಯ. ಆದರೆ, ಪ್ರಜಾಪ್ರಭುತ್ವದಲ್ಲಿ ಚುನಾವಣೆ ಸಂದರ್ಭ ಹಣದ ಪ್ರಭಾವವಿದ್ದು, ಎಲ್ಲಾ ಪಕ್ಷಗಳು ಜನಸಾಮಾನ್ಯರಿಗೆ ಹಣ ಹಂಚಿಕೆ ಮಾಡಿ ಮತದಾನ ಪಡೆಯುವ ಸ್ಥಿತಿ ಬಂದಿದೆ. ಇದನ್ನು ಬದಲಾಯಿಸಬೇಕಾದರೆ ಮತದಾರರು ಹಣವನ್ನು ಪಡೆಯದೆ ನಿಷ್ಠಾವಂತ, ಪ್ರಾಮಾಣಿಕ ವ್ಯಕ್ತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು. ಆಗ ದೇಶದಲ್ಲಿ ಭ್ರಷ್ಟಾಚಾರ ತಾನಾಗಿಯೇ ಕಡಿಮೆಯಾಗುತ್ತದೆ ಎಂದರು.

ಸಮಾಜದ ಸುಧಾರಣೆಯಾದರೆ ರಾಜ್ಯ, ರಾಷ್ಟ್ರವು ಅಭಿವೃದ್ಧಿಯಾಗುತ್ತದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಇದರಿಂದ ಇಡೀ ಸಮಾಜವೇ ಸುಧಾರಿಸುತ್ತದೆ. ರಾಷ್ಟ್ರವು ಅಭಿವೃದ್ಧಿ ಪಥಕ್ಕೆ ಸಾಗಿಸಬೇಕಾದರೆ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವ ಕಾರ್ಯವಾಗಬೇಕು ಎಂದ ಅವರು, 1988ರಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಜಾರಿಗೆ ತರಲಾಗಿದ್ದು, 30 ವರ್ಷಗಳು ಕಳೆದಿದೆ. ಈ ಮೊದಲ ಸ್ವಾತಂತ್ರ್ಯ ನಂತರ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಇದ್ದು, ಅಷ್ಟೊಂದು ಕಠಿಣ ಕಾನೂನು ಇರಲಿಲ್ಲ. 1988ರ ನಂತರ ಕಠಿಣ ಕಾನೂನು ಜಾರಿಗೆ ತರಲಾಗಿದ್ದು, ಭ್ರಷ್ಟಾಚಾರ ಮಾತ್ರ ಕಡಿಮೆಯಾಗಿಲ್ಲ ಎಂದರು.

ಭ್ರಷ್ಟಾಚಾರ ನಿಯಂತ್ರಣಕ್ಕೆ ಶಾಲಾ ಮತ್ತು ಕಾಲೇಜುಗಳಲ್ಲಿ ಭ್ರಷ್ಟಾಚಾರ ವಿರೋಧಿ ಅಭಿಯಾನ ಜಾಥಾ ಮಾಡಬೇಕು. ನಮ್ಮ ವೋಟಿಗೆ ನಿಮ್ಮ ನೋಟು ಬೇಡ ಎನ್ನುವ ಘೋಷ ವಾಕ್ಯದೊಂದಿಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕಾಗಿದೆ. ಇದರಿಂದ ಭ್ರಷ್ಟಾಚಾರ ಮುಕ್ತ ದೇಶಕ್ಕೆ ಸಹಕಾರಿಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಹನುಮಂತಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಟಿ.ಆರ್. ರಂಗಸ್ವಾಮಿ, ಕೆ. ಪ್ರಕಾಶ್, ತಾರರಾಣಿ, ಶ್ವೇತಾ ಮತ್ತಿತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News