×
Ad

ಕೊಡವ, ತುಳು ಭಾಷೆಗಳು 8ನೇ ಪರಿಚ್ಚೇದಕ್ಕೆ ಸೇರ್ಪಡೆಯಾಗಲಿ: ಡಾ. ದೊಡ್ಡರಂಗೇಗೌಡ

Update: 2018-01-20 23:49 IST

ಮಡಿಕೇರಿ (ವೇದವ್ಯಾಸ ವೇದಿಕೆ), ಜ.20: ಭಾರತದ ಎಲ್ಲ ಮಾತೃಭಾಷಿಕರನ್ನು ಒಗ್ಗೂಡಿಸುವ ಉದಾತ್ತ ಚಿಂತನೆಗಳಡಿ ಕಾರ್ಯನಿರ್ವಹಿಸುತ್ತಿರುವ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಕನ್ನಡದ ಸಹೋದರ ಭಾಷೆಗಳಾದ ಕೊಡವ ಮತ್ತು ತುಳು ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ತನ್ನ ಸಂಪೂರ್ಣ ಬೆಂಬಲವಿದೆ ಎಂದು ಪರಿಷತ್‌ನ ರಾಜ್ಯಾಧ್ಯಕ್ಷ ಡಾ. ದೊಡ್ಡರಂಗೇಗೌಡ ಹೇಳಿದ್ದಾರೆ.

ನಗರದ ಕ್ರಿಸ್ಟಲ್ ಹಾಲ್‌ನ ಹರದಾಸ ಅಪ್ಪಚ್ಚಕವಿ ಸಭಾಂಗಣದ ವೇದವ್ಯಾಸ ವೇದಿಕೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕೊಡಗು ಜಿಲ್ಲಾ ಘಟಕ ಮತ್ತು ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, ಕೊಡಗಿನ ಕೊಡವ ಭಾಷೆ ಹಾಗೂ ತುಳು ಭಾಷೆಗೆ ಪ್ರಾಧಾನ್ಯತೆ ದೊರಕಬೇಕಾಗಿದೆ ಎಂದರು.

ಕನ್ನಡ ಪರಂಪರೆಯ ಹಿರಿಯ ಕವಿ ಪಂಪ ತನ್ನ ಕಾವ್ಯದಲ್ಲಿ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದು ಮನುಷ್ಯರೆಲ್ಲರು ಒಂದೇ ಎಂದು ಸಾರಿದರೆ, ಕುವೆಂಪು ‘ಸರ್ವರಿಗೂ ಸಮಪಾಲು ಸಮಬಾಳು’ ಎಂದು ಸಮಾನತೆಯ ಪರಿಕಲ್ಪನೆಯನ್ನು ಸಾರಿದ್ದಾರೆ. ಅದೇ ರೀತಿ ಅಂಬೆಡ್ಕರ್ ರಚಿಸಿದ ಸಂವಿಧಾನ ಸಮಾನತೆಯನ್ನು ಎತ್ತಿ ಹಿಡಿದ ಮಹಾನ್ ಗ್ರಂಥವಾಗಿದೆಯೆಂದು ವಿಶ್ಲೇಷಿಸಿ, ಇಂತಹ ನಾಡಿನಲ್ಲಿ ಇತರ ಭಾಷೆಗಳಂತೆಯೇ ಕೊಡಗಿನ ಕೊಡವ ಭಾಷೆ, ತುಳುನಾಡಿನ ತುಳು ಭಾಷೆಗೆ ಆದ್ಯತೆಯನ್ನು ನೀಡಿ ಅದರ ಬೆಳವಣಿಗೆಗೆ ಕೈಜೋಡಿಸುವುದು ಅತ್ಯವಶ್ಯವೆಂದು ವಿಶ್ಲೇಷಿಸಿದರು.

ಯುವ ಸಮೂಹವಿಂದು ಧರ್ಮ, ಸಂಸ್ಕೃತಿಯ ಬೇರುಗಳಿಲ್ಲದೆ ಅಮೆರಿಕ, ಇಂಗ್ಲೆಂಡ್‌ನತ್ತ ಒಲವು ತೋರುತ್ತಿರುವುದರತ್ತ ಬೊಟ್ಟು ಮಾಡಿದ ದೊಡ್ಡಗಂಗೇಗೌಡರು, ಜನ್ಮ ಕೊಟ್ಟ ತಾಯಿ ಹಾಗೂ ಭರತ ಭೂಮಿಯನ್ನು ಸ್ಮರಿಸಿ ಗೌರವಿಸುವುದನ್ನು ಯುವ ಸಮೂಹ ಕಲಿತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಬಿಚ್ಚುಗತ್ತಿ ಪುಸ್ತಕ ಅನಾವರಣ: ಮೈಸೂರಿನ ಪ್ರದೀಪ್ ಅವರಿಂದ ಅನುವಾದಿಸಲ್ಪಟ್ಟ ರವಿಕುಮಾರ್ ಅವರ ಕೃತಿ ‘ಬಿಚ್ಚುಗತ್ತಿ’ಯನ್ನು ಸಾಹಿತಿಗಳಾದ ಗುಲ್ಬರ್ಗದ ಪ್ರಭಾಕರ ಜೋಷಿ ಅನಾವರಣಗೊಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕೊಡಗು ಘಟಕದ ಅಧ್ಯಕ್ಷ ಅಡ್ಡಂಡ ಸಿ. ಕಾರ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಭಾ ಪ್ರಾರ್ಥಿಸಿದರು. ಆಶಾ ಧರ್ಮಪ್ಪಮತ್ತು ಅನಿತಾ ಕಾರ್ಯಪ್ಪ, ಚಂದ್ರ ಉಡೋತ್ ಅತಿಥಿಗಳನ್ನು ಪರಿಚಯಿಸಿದರು. ಪರಿಷದ್‌ನ ಕೊಡಗು ಘಟಕದ ಸಂಚಾಲಕ ಎಂ.ಕೆ. ಜಯಕುಮಾರ್ ಸ್ವಾಗತಿಸಿದರು. ಹರೀಶ್ ಸರಳಾಯ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯರ್ಶಿ ಸುನಿಲ್ ಕೋರನ ವಂದಿಸಿದರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News