ಸಮಾನಾಂತರ ಅವಕಾಶಗಳ ವ್ಯವಸ್ಥೆ ಕಲ್ಪಿಸುವುದು ಸಂವಿಧಾನದ ಆಶಯ: ಕೆ.ಟಿ.ರಾಧಾಕೃಷ್ಣ

Update: 2018-01-21 11:20 GMT

ಚಿಕ್ಕಮಗಳೂರು, ಜ.21: ಹಿಂಸೆಯಿಲ್ಲದ ನಾಡು ನಮ್ಮದಾಗಬೇಕು. ಸಮಾನಾಂತರ ಅವಕಾಶಗಳ ವ್ಯವಸ್ಥೆ ಕಲ್ಪಿಸುವುದು ಸಂವಿಧಾನದ ಆಶಯ ಎಂದು ಬಿಎಸ್‍ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನುಡಿದರು.
ಅವರು ಜಿಲ್ಲಾ ಸಹೋದರತ್ವ ಸಮಿತಿಯು ನಗರದ ಸುವರ್ಣ ಮಾಧ್ಯಮ ಭವನದ ಚಿಕ್ಕೊಳಲೆಸದಾಶಿವಶಾಸ್ತ್ರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮಾಸಿಕ ಚಿಂತನ ಗೋಷ್ಠಿಯಲ್ಲಿ ಮಾತನಾಡಿದರು. ಬುದ್ಧಿ, ವಿದ್ಯೆ, ನಡತೆಯನ್ನು ಕಲಿಸಿದವರು ಭಗವಾನ್‍ಬುದ್ಧ, ಸಾಹುಮಹಾರಾಜ, ಪೆರಿಯಾರ್, ನಾರಾಯಣಗುರು, ಬಸವಣ್ಣ, ಡಾ.ಅಂಬೇಡ್ಕರ್, ಕಾನ್ಷಿರಾಮ್ ಸೇರಿದಂತೆ ಹಲವು ಮಹಾನೀಯರು.  ಅವರ ಆಶಯಗಳಿಗೆ ಅನುಗುಣವಾಗಿ ನಮ್ಮ ಸಂವಿಧಾನ ರೂಪುಗೊಂಡಿದೆ. ಇದರಿಂದಾಗಿ ದುರಾತ್ಮರಿಗೆ ಸಮಾಜದಲ್ಲಿ ಭಯಭೀತಿ ರೂಪಿತವಾಗಿದೆ ಎಂದು ತಿಳಿಸಿದರು.

ಮಾನವರಿಗೆಲ್ಲರಿಗೂ ಹೃದಯ, ಕನಸು, ಮನಸ್ಸು ಇದೆ. ಇನ್ನೊಬ್ಬರಿಗೆ ಕೇಡು ಬಯಸಬಾರದು. ತ್ಯಾಗದಿಂದ ಸಾಧಿಸಿದ ಮಹಾಪುರುಷರ ಹೋರಾಟದಿಂದ ಸಮಾಜದಲ್ಲಿ ಒಂದಷ್ಟು ಬದಲಾವಣೆ ಸಹಜವಾಗಿಯೆ ಬಂದಿದೆ.  ಅವರ ಅನುಯಾಯಿಗಳಿಂದ ನೀತಿ, ನಿರೂಪಣೆ ಇದೆ. ಬಾಲಕಿ ದಾನಮ್ಮ ಮೇಲಿನ ಅತ್ಯಾಚಾರ, ಕೊಲೆಪ್ರಕರಣ ನಾಚಿಕೆಗೇಡು. ಧನ್ಯಶ್ರೀಯದು ಆತ್ಮಹತ್ಯೆಅಲ್ಲ ಅದೊಂದು ಕೊಲೆ ಎಂದ ರಾಧಾಕೃಷ್ಣ,  ಕಾನೂನು ಕಠಿಣವಾಗಿದೆ. ಲಾಲಸೆಗೆ ಸಮಾಜ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು. ನಾವೆಲ್ಲ ನಿಂತ ನೀರಾಗದೆ ಹರಿಯುವ ನೀರಾಗಿ ಕಲ್ಮಷಮುಕ್ತ ಶುದ್ಧತೆ ಹೊಂದಬೇಕು ಎಂದು ಹೇಳಿದರು.
  ವಕೀಲ ಪರಮೇಶ್ ಮಾತನಾಡಿ ಒಂದುರಾಷ್ಟ್ರದ ಆಡಳಿತವ್ಯವಸ್ಥೆಗೆ ಮಾದರಿಯ ಸಂವಿಧಾನ ನಮ್ಮದಾಗಿದೆ.  ಶಾಸಕ, ಕಾರ್ಯಾಂಗ ಮತ್ತು ನ್ಯಾಯಾಂಗಗಳೊಂದಿಗೆ ಆಡಳಿತ ನಡೆಸುವುದು ಹೇಗೆಂಬುದನ್ನು ತಿಳಿಸಿದೆ.  ಸಂವಿಧಾನ ರಚನೆಗೂ ಮುನ್ನ ಬ್ರಿಟೀಷ್ ಕಂಪನಿ, ರಾಜರುಗಳು ಸುಲ್ತಾನರು ಆಡಳಿತ ನಡೆಸಿದ್ದರು.  ಅದಕ್ಕೂ ಹಿಂದೆ ಮನುಸ್ಮೃತಿ ಅನ್ವಯ ನಾಲ್ಕುವರ್ಗಗಳಾಗಿ ವಿಂಗಡಿಸಿದ ಸಮಾಜವ್ಯವಸ್ಥೆ ಇತ್ತು. ಬ್ರಾಹ್ಮಣ, ವೈಶೈ ಮತ್ತು ಕ್ಷತ್ರಿಯ ಈ ಮೂರುವರ್ಗದ ಸೇವೆ ಶೂದ್ರರು ಮಾಡಬೇಕಾಗಿತ್ತು. 

ಶೂದ್ರರಿಗೆ ಮತ್ತು ಮಹಿಳೆಯರಿಗೆ ಅಲ್ಲಿ ಸ್ವಾತಂತ್ರ್ಯವಿರಲಿಲ್ಲ. ಡಾ.ಅಂಬೇಡ್ಕರ್ ರೂಪಿಸಿದ ಸಂವಿಧಾನ ಸರ್ವ ಶ್ರೇಷ್ಠವಾಗಿದೆ. ಇದರಿಂದಾಗಿ ದಲಿತ ರಾಷ್ಟ್ರಪತಿಯಾಗಿದ್ದಾರೆ. ಚಹಾ ಮಾರುವ ವ್ಯಕ್ತಿ ಪ್ರಧಾನಮಂತ್ರಿ ಆಗಿದ್ದಾರೆ. ವಿವಿಧ ಭಾಷೆ, ವೇಷ, ಅನೇಕ ವೈರುಧ್ಯಗಳಿರುವ ಸಮಾಜವನ್ನು ಬೆಸೆದು ಭಾರತ ಒಂದೇ ಆಡಳಿತದೊಳಗೆ ತಂದು ಸಮಾನತೆಯನ್ನು ಕೊಟ್ಟ ಹಿರಿಮೆ ಸಂವಿಧಾನದ್ದಾಗಿದೆ ಎಂದ ಪರಮೇಶ್,  ಜನಸಂಖ್ಯೆಗೆ ಅನುಗುಣವಾದ ಪಾಲು ಆಡಳಿತದಲ್ಲಿ ಸಿಗಬೇಕಾಗಿದೆ ಎಂದು ಪ್ರತಿಪಾದಿಸಿದರು.  

ಹಿರಿಯ ಸದಸ್ಯ ಕೆ.ಎಸ್.ಮಲ್ಲೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ಸಹೋದರತ್ವ ಸಮಿತಿ ಮಹಿಳಾ ಸಂಘದ ಅಧ್ಯಕ್ಷೆ ಕೆ.ಬಿ.ಸುಧಾ ಮತ್ತು ಪ್ರಧಾನ ಕಾರ್ಯದರ್ಶಿ ಸವಿತಾ, ಬಿಎಸ್‍ಪಿ ಉಪಾಧ್ಯಕ್ಷೆ ರೇಖಾ, ವಕೀಲೆ ಮಂಜುಳಾ ಕರ್ಲೇಕರ್, ಮುಖಂಡ ಹಿರೇಮಗಳೂರು ರಾಮಚಂದ್ರ, ವಿದ್ಯಾರ್ಥಿ ಮುಖಂಡ ತ್ರಿಮೂರ್ತಿ ಮತ್ತಿತರರು ಮಾತನಾಡಿದರು. ಬಿಎಸ್‍ಪಿಕಛೇರಿ ಕಾರ್ಯದರ್ಶಿ ಕೆ.ಆರ್.ಗಂಗಾಧರ್ ಸ್ವಾಗತಿಸಿ, ನಿರೂಪಿಸಿದ್ದು, ಕಲಾವತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News