ಪ್ರತಿ ಹೋಬಳಿ ಭಾಗದಲ್ಲಿ ಶೈಕ್ಷಣಿಕ ಸವಲತ್ತುಗಳು ಸಿಗುವಂತಾಗಬೇಕು: ಬಿ.ಬಿ.ನಿಂಗಯ್ಯ

Update: 2018-01-21 11:22 GMT

ಬಣಕಲ್, ಜ.21: ಪ್ರತಿ ಹೋಬಳಿ ಭಾಗದಲ್ಲಿ ಶೈಕ್ಷಣಿಕ ಸವಲತ್ತುಗಳು ಸಿಗುವಂತಾಗಬೇಕು. ಮಕ್ಕಳು ಶಿಕ್ಷಣ ಕಲಿಯಲು ಯಾವುದೇ ಕೊರತೆಗಳಿದ್ದರೆ ಯಾವ ವಿದ್ಯಾರ್ಥಿಗಳು ಸಮರ್ಪಕವಾಗಿ ಶಿಕ್ಷಣ ಕಲಿಯಲು ಸಾಧ್ಯವಿಲ್ಲ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹೇಳಿದರು.

ಅವರು ಬಣಕಲ್‍ನ ಸರಕಾರಿ ಸ್ವತಂತ್ರ ಪಿಯು ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು. ಪ್ರೌಢಶಿಕ್ಷಣವು ಜೀವನದ ಮುಖ್ಯ ಗುರಿಯಾಗಿದ್ದು ಇಲ್ಲಿ ಉತ್ತಮವಾಗಿ ಕಲಿತರೆ ಭವಿಷ್ಯ ರೂಪಿಸಿಕೊಳ್ಳಲು ಸಹಾಯಕವಾಗುತ್ತದೆ. ಕಾಲೇಜಿಗೆ ಉತ್ತಮ ಕಟ್ಟಡದ ಅವಶ್ಯಕತೆಯಿತ್ತು.ಅದು ಈಗ ನೂತನ ಹೆಚ್ಚುವರಿ ಕಟ್ಟಡ ನಿರ್ಮಿಸಿರುವ ಮೂಲಕ ಕಾಲೇಜಿಗೆ ಶೈಕ್ಷಣಿಕ ಸೌಲಭ್ಯ ದೊರೆತಿದೆ ಎಂದು ತಿಳಿಸಿದರು.

ಎಂಎಲ್‍ಸಿ ಡಾ. ಶ್ರೀಮತಿ ಮೋಟಮ್ಮ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ಉದ್ಘಾಟಿಸಿ ಮಾತನಾಡಿ, ನಬಾರ್ಡ್ ವತಿಯಿಂದ ಕಾಲೇಜಿಗೆ ಸುಮಾರು 50 ಲಕ್ಷ ಅನುಧಾನ ದೊರೆತಿದ್ದು ಇದರಿಂದ ಹೆಚ್ಚುವರಿ ಎರಡು ಕೊಠಡಿ ನಿರ್ಮಿಸಲು ಸಾಧ್ಯವಾಗಿದೆ. ಸುಮಾರು ವರ್ಷಗಳ ಹಿಂದೆ ಕಾಲೇಜಿಗೆ ಸ್ಥಳವಿಲ್ಲದೇ ಬಣಕಲ್ ಪಂಚಾಯತ್ ಕಟ್ಟಡದಲ್ಲಿ ಕಾಲೇಜಿಗೆ ಸ್ಥಳ ನೀಡಲಾಗಿತ್ತು. ಆದರೆ ಈಗ ಕಾಲೇಜಿಗೆ ನೂತನ ಕಟ್ಟಡವಿದ್ದು ಮಕ್ಕಳು ಇದರ ಸದುಪಯೋಗವನ್ನು ಮಾಡಬೇಕು. ಕಾಲೇಜಿನ ಮಕ್ಕಳು ಶಿಸ್ತು ಕಲಿಯಬೇಕು ಎಂದರು.

ಜಿ.ಪಂ. ಸದಸ್ಯ ಶಾಮಣ್ಣ ಬಣಕಲ್ ಮಾತನಾಡಿ, ಮಕ್ಕಳು ಮೂಲಭೂತ ಸೌಲಭ್ಯದ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಬಾರದು. ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕೇಂದ್ರಗಳಾಗಿವೆ. ದಶಕಗಳ ಹಿಂದೆ ಹಳ್ಳಿಗಳಿಂದ ಕಾಲೇಜಿಗೆ ಹೋಗುವುದೆ ಕಷ್ಟವಾಗುತ್ತಿತ್ತು. ಆದರೆ ಈಗ ಅಂತಹ ಸಮಸ್ಯೆಗಳು ಇಲ್ಲ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ನುಡಿದರು.
ಕಾಲೇಜಿನ ಸಮಿತಿಯ ಖಜಾಂಚಿ ಬಿ.ಡಿ.ವಿಜಯೇಂದ್ರಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಉಪನ್ಯಾಸಕಿ ಶ್ರೀಶಾರದ ಓದಿದರು. ಕಾಲೇಜಿಗೆ ಹುಡುಗಿಯರ ವಸತಿ ನಿಲಯ (ಹಾಸ್ಟೆಲ್)ಮತ್ತು ವಾಚನಾಲಯಕ್ಕೆ ವರದಿಯಲ್ಲಿ ಪ್ರಸ್ತಾವನೆ ಮಂಡಿಸಲಾಯಿತು. 

ಬಣಕಲ್ ಗ್ರಾಪಂ ಅಧ್ಯಕ್ಷ ಬಿ.ವಿ.ಸುರೇಶ್, ಕಾಲೇಜಿನ ಕಾರ್ಯಾಧ್ಯಕ್ಷ  ಡಾ.ಎ.ಯು.ಪಾದೂರು, ಖಜಾಂಚಿ ಬಿ.ಡಿ.ವಿಜೇಂದ್ರಗೌಡ, ಕೆ.ಎಸ್.ಗೋಪಾಲಾಚಾರ್, ಬಿ.ಎಸ್.ವಿವೇಕ್, ನಾಗೇಶ್‍ಗೌಡ, ಎಇಇ ಚಂದ್ರಶೇಖರ್, ಅಭಿಯಂತರ ನಾಗರಾಜ್, ಶರಣಪ್ಪ, ಗುತ್ತಿಗೆದಾರ ಅಬೂಬಕರ್, ಕಾಂಗ್ರೆಸ್‍ನ ಕಾರ್ಯಧರ್ಶಿ ಬಿ.ಎ.ಉಮ್ಮರ್, ಪ್ರಾಂಶುಪಾಲ ಜಂಶೀದ್ ಅಹಮ್ಮದ್, ಉಪನ್ಯಾಸಕರಾದ ವಸಂತಕುಮಾರ್, ಜಗದೀಶ್, ಮಲ್ಲಿಕಾರ್ಜುನ್, ಶ್ರೀಶಾರದ, ಊರಿನ ಪ್ರಮುಖರಾದ ಶಿವರಾಮ ಶೆಟ್ಟಿ, ಬೆಳಗೋಡು ಮಹೇಶ್ ಮತ್ತಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News