ಅಂಬಿಗರ ಚೌಡಯ್ಯನ ತತ್ವ - ಆದರ್ಶಗಳನ್ನು ಮೈಗೂಡಿಸಿಕೊಂಡರೆ ಶಾಂತಿ ಸಾಧ್ಯ : ಎ.ಎನ್. ಮಹೇಶ್

Update: 2018-01-21 11:35 GMT

ಚಿಕ್ಕಮಗಳೂರು, ಜ.21: ದಾರ್ಶನಿಕರಾದ ನಿಜಶರಣ ಅಂಬಿಗರ ಚೌಡಯ್ಯನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ನಡೆದರೆ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾದ್ಯ ಎಂದು ಅರಣ್ಯ ವಸತಿ ಮತ್ತು ವಿಹಾರಧಾಮಗಳ ನಿಗಮದ ಅಧ್ಯಕ್ಷ ಎ.ಎನ್.ಮಹೇಶ್ ಕರೆ ನೀಡಿದರು.

ಅವರು ರವಿವಾರ ಜಿಲ್ಲಾಡಳಿತದ ನಗರದ ಕುವೆಂಪು ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀಅಂಬಿಗರ ಚೌಡಯ್ಯ ಜಯಂತಿ ಆಚರಣಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಬಸವಣ್ಣನವರ ಅನುಯಾಯಿಗಳಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಕರಲ್ಲಿ ಒಬ್ಬರಾಗಿದ್ದರು ಅವರು ನೇರ, ನಿಷ್ಠೂರ, ತರ್ಕ ವಚನಗಳಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರೇಷ್ಠರಾಗಿದ್ದರು. 

ಪ್ರಮುಖರನ್ನು ಗುರುತಿಸುವ ಜೊತೆಗೆ ಅವರ ಸಹಚರರನ್ನು ಗುರುತಿಸುವುದು ಬಹಳ ಮುಖ್ಯ. ನಿಜಶರಣ ಅಂಬಿಗರ ಚೌಡಯ್ಯ ನಿರ್ಮಿಸಿದ ಸಮಾರು 334 ವಚನಗಳು ಕೂಡ ಒಂದೊಂದು ವಚನವು ಪಿಹೆಚ್‍ಡಿಗೆ ಸಮಾನ. ಇಂದು ಸಮಾಜದಲ್ಲಿ ಸಣ್ಣ ಸಣ್ಣ ಸಮುದಾಯಗಳು ಒಗ್ಗೂಡುವ ಅಗತ್ಯತೆ ತುಂಬಾ ಅತ್ಯವಶ್ಯಕವಾಗಿದೆ. ಎಲ್ಲಾ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದಾಗ ಮಾತ್ರ ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯ ಎಂದು ನುಡಿದರು.

ಶಾಸಕ ಸಿ.ಟಿ. ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾನ್ ದಾರ್ಶನಿಕರನ್ನು ಜಾತಿಗಳ ಚೌಕಟ್ಟಿನಲ್ಲಿ ಕಟ್ಟಿ ಹಾಕದೇ ಅವರು ಹಾಕಿ ಕೊಟ್ಟ ಜೀವನದ ಮೌಲ್ಯಗಳು ಸರ್ವಕಾಲಿಕವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದ ಅವರು ಯಾವುದೇ ಒಬ್ಬ ವ್ಯಕ್ತಿ ಹುಟ್ಟಿನಿಂದ ಶ್ರೇಷ್ಠನಾಗುವುದಿಲ್ಲ, ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡಾಗ ಮಾತ್ರ ಸಮಾಜದಲ್ಲಿ ಶ್ರೇಷ್ಠತೆ ಕಾಣಲು ಸಾಧ್ಯ ಎಂದರು. 

ಅಂಬಿಗರ ಚೌಡಯ್ಯನವರ ಪ್ರತಿಯೊಂದು ವಚನಗಳ ಒಳ ಹರಿವಿನ ಅರ್ಥ ಖಡ್ಗವಿಲ್ಲದಿದ್ದರೂ ನುಣುಪಾಗಿರುತ್ತದೆ ಎಂದ ಅವರು ಯಾರು ತನ್ನನ್ನು ಅರಿಯಲಾರನೋ ಆತ ಎಂದಿಗೂ ಪ್ರಪಂಚವನ್ನು ಅರಿಯಲಾರ ಎಂದು ಹೇಳಿದರು.

ವೈದ್ಯಕೀಯ ಸಾಹಿತಿಗಳಾದ ಪ್ರೋ ಡಾ. ಸತ್ಯನಾರಾಯಣ ನಿಜಶರಣ ಶ್ರೀ ಅಂಬಿಗರ ಚೌಡಯ್ಯ ಕುರಿತು ಉಪನ್ಯಾಸ ನೀಡಿ ಅಂಬಿಗರ ಚೌಡಯ್ಯನವರು ಮಹಾನ್ ದಾರ್ಶನಿಕರು ಸಮಾಜದ ಒಳಿತಿಗಾಗಿ ರಚಿಸಿರುವ ಅವರ ವಚನಗಳೇ ಪ್ರತಿಯೊಬ್ಬ ಯುವಪೀಳಿಗೆಗೂ ದಾರಿ ದೀಪವಾಗಿದೆ ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಪಂ ಸಿಇಓ ಸಿ.ಸತ್ಯಭಾಮ, ದಲಿತ ಸಮಾಜದ ಮುಖಂಡ ಕೆ.ಟಿ. ರಾಧಾಕೃಷ್ಣ, ಗಂಗಾಮತಸ್ಥ ಸಂಘದ ಅಧ್ಯಕ್ಷ ಕೆ.ಎಂ.ಧನಂಜಯ್, ಮೊಗವೀರ ಸಂಘದ ಅಧ್ಯಕ್ಷ ಡಿ.ಎಲ್.ಶಂಕರನಾಥ, ತಾಲ್ಲೂಕು ಗಂಗಾಮತಸ್ಥ ಸಂಘದ ಅಧ್ಯಕ್ಷ ಧಮೇಶ್ ಉಪಸ್ಥಿತರಿದ್ದರು.

‘12ನೇ ಶತಮಾನದಲ್ಲಿ ಶರಣರಾದ ಅಂಬಿಗರ ಚೌಡಯ್ಯ ಸಾಮಾಜಿಕ ಮೌಲ್ಯಗಳ ಚಿಂತನೆಗೆ ಹೆಚ್ಚು ಹೊತ್ತು ನೀಡಿದರು. ಸಮಾಜದಲ್ಲಿ ಅಸಮಾನತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದ ಇವರ ಚಿಂತನೆ ಮತ್ತು ತತ್ವ ಆದರ್ಶಗಳನ್ನು ಇಂದು ನಾವುಗಳು ಅಳವಡಿಸಿಕೊಳ್ಳುವುದರೊಂದಿಗೆ ಸ್ವಾಸ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’
- ಎ.ಎನ್.ಮಹೇಶ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News