ಬಿಜೆಪಿಯನ್ನು ಸೋಲಿಸುವುದು ಕೇವಲ ನಮ್ಮೊಬ್ಬರ ಜವಾಬ್ದಾರಿಯಲ್ಲ : ಶರ್ಫುದ್ದೀನ್ ಸಾಹೇಬ್

Update: 2018-01-21 14:15 GMT

ಬೆಂಗಳೂರು, ಜ.21: ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ಕೇವಲ ನಮ್ಮೊಬ್ಬರ ಜವಾಬ್ದಾರಿಯಲ್ಲ. ಇದಕ್ಕಾಗಿ ಜಾತ್ಯತೀತ ತತ್ವದ ಪ್ರತಿಪಾದನೆ ಮಾಡುವ ಕಾಂಗ್ರೆಸ್, ಜೆಡಿಎಸ್ ಕೈ ಜೋಡಿಸಲಿ ಎಂದು ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಶರ್ಫುದ್ದೀನ್ ಸಾಹೇಬ್ ಕಾನ್ಪುರ್ ಹೇಳಿದರು.

ರವಿವಾರ ನಗರದ ಹಮೀದ್ ಷಾ ಕಾಂಪ್ಲೆಕ್ಸ್‌ನಲ್ಲಿರುವ ಎಸ್‌ಡಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ಯತೀತ ಮತಗಳು ವಿಭಜನೆಯಾಗಬಾರದು ಎಂಬುದು ನಮ್ಮ ಉದ್ದೇಶವೂ ಆಗಿದೆ. ಜತೆಗೆ, ಒಂದು ರಾಜಕೀಯ ಪಕ್ಷವಾಗಿ ತನ್ನ ಕಾರ್ಯಕರ್ತರ ಹಿತವನ್ನು ರಕ್ಷಣೆ ಮಾಡಬೇಕಾದ ಅಗತ್ಯವು ಇದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಮ್ಮ ಬಗ್ಗೆ ನೀಡಿರುವ ಬೇಜವಾಬ್ದಾರಿ ಹೇಳಿಕೆಯಿಂದ ಕಾಂಗ್ರೆಸ್ ಭಯದ ವಾತಾವರಣದಲ್ಲಿ ಸಿಲುಕಿಕೊಂಡಿದೆ. ಅಸ್ಸಾಂ ರಾಜ್ಯದ ಚುನಾವಣೆಯಲ್ಲಿ ಬದ್ರುದ್ದೀನ್ ಅಜ್ಮಲ್ ಜತೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ಮುಂದಾಗದ ಪರಿಣಾಮ, ಬಿಜೆಪಿಗೆ ಸುಲಭವಾಗಿ ಗೆಲುವು ಸಿಗುವಂತಾಯಿತು ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷ ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ತನ್ನ ಮುಂದಿರುವ ಗುಪ್ತಚರ ವರದಿಯನ್ನು ಅರ್ಥ ಮಾಡಿಕೊಂಡು, ನಮ್ಮ ಜತೆ ಮಾತುಕತೆಗೆ ಮುಂದಾಗಲಿ. ಬಿಜೆಪಿಯನ್ನು ಸೋಲಿಸುವುದು ನಮ್ಮೊಬ್ಬರ ಜವಾಬ್ದಾರಿಯಲ್ಲ. ನಾವು ಇಲ್ಲದೇ ಇದ್ದಾಗಲು ಬಿಜೆಪಿ ಇಲ್ಲಿ ಗೆದ್ದು ಬಂದಿತ್ತು. ಈ ವಿಚಾರದಲ್ಲಿ ಗಂಭೀರವಾಗಿ ಆಲೋಚಿಸುವುದು ಅಗತ್ಯ ಎಂದು ಶರ್ಫುದ್ದೀನ್ ತಿಳಿಸಿದರು.

ದೇಶವು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಮುಂದುವರೆಯುತ್ತಿದೆ. ಶಾಸನ ಸಭೆಗಳಲ್ಲಿ ಮುಸ್ಲಿಮ್ ಜನಪ್ರತಿನಿಧಿಗಳ ಸಂಖ್ಯೆ ಕುಸಿಯಲು ಹಲವಾರು ಕಾರಣಗಳಿವೆ. ಎಸ್‌ಡಿಪಿಐ ಕಾರ್ಯಕರ್ತರ ಪಕ್ಷವಾಗಿದ್ದು, ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ. ಸಮಾಜದ ಎಲ್ಲ ವರ್ಗಗಳ ಮತಗಳ ಕ್ರೋಢಿಕರಣಕ್ಕೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಡಿಪಿಐ 50 ಕಡೆ ಸ್ಪರ್ಧಿಸಲಿದೆ. ಈಗಾಗಲೆ, 6 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದ್ದು, ಅವರು ಕೆಲಸ ಆರಂಭಿಸಿದ್ದಾರೆ ಎಂದರು.
ರಾಜ್ಯದಲ್ಲಿ ಮುಸ್ಲಿಮರು, ದಲಿತರು, ಆದಿವಾಸಿಗಳ ವಿಚಾರಗಳನ್ನು ಮುಂದಿಟ್ಟುಕೊಂಡು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ನಿಜವಾಗಿ ಹೋರಾಟ ಮಾಡುತ್ತಿರುವುದು ನಾವು. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.

ಬಿಜೆಪಿ ಜತೆ ನಾವು ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಕೆಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ವಿಧಾನಸಭೆ ಒಳಗೆ ಅಥವಾ ಹೊರಗೆ ಮುಸ್ಲಿಮರ ವಿಷಯಗಳನ್ನು ಮುಂದಿಟ್ಟುಕೊಂಡು ಯಾರೊಬ್ಬರೂ ಮಾತನಾಡಿಲ್ಲ ಎಂದು ಅಬ್ದುಲ್ ಮಜೀದ್ ಟೀಕಿಸಿದರು.

ಶಾಸನ ಸಭೆಗಳಲ್ಲಿ ನಮ್ಮ ಧ್ವನಿಯೂ ಕೇಳಿ ಬರಬೇಕು. ಗುಜರಾತ್‌ನಲ್ಲಿ ತನ್ನ ಪಕ್ಷದ ಶಾಸಕ ಇದ್ದ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಿಗ್ನೇಶ್ ಮೇವಾನಿಗೆ ಕಾಂಗ್ರೆಸ್ ಬೆಂಬಲ ನೀಡಿತು. ನಾವು ಮಾತುಕತೆಗೆ ಮುಕ್ತರಾಗಿದ್ದೇವೆ. ಅಧಿಕೃತವಾಗಿ ಸೀಟು ಹಂಚಿಕೆ ವಿಚಾರದಲ್ಲಿ ಚರ್ಚೆಗಳು ನಡೆಯಲಿ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಇಲ್ಯಾಸ್ ಮುಹಮ್ಮದ್ ತುಂಬೆ, ಮುಹಮ್ಮದ್ ಶಫಿ, ರಾಜ್ಯ ಕಾರ್ಯದರ್ಶಿ ಅಕ್ರಮ್ ಹಸನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News