‘ಅಪಘಾತ ರಹಿತ 588 ಮಂದಿ ಚಾಲಕರಿಗೆ ಬೆಳ್ಳಿ ಪದಕ’

Update: 2018-01-21 14:23 GMT

ಬೆಂಗಳೂರು, ಜ. 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್ಸಾರ್ಟಿಸಿ) ಹದಿನೈದು ವಿಭಾಗಗಳ ಒಟ್ಟು 588 ಮಂದಿ ಅಪಘಾತ ಮತ್ತು ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಗುವುದು ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಪ್ರಕಟಿಸಿದ್ದಾರೆ.

ನಿಗಮದಲ್ಲಿ 1982ನೆ ಸಾಲಿನಿಂದ ಈ ಯೋಜನೆಯನ್ವಯ ಗ್ರಾಮೀಣ ಸಾರಿಗೆಗಳಲ್ಲಿ 5 ವರ್ಷಗಳ ಕಾಲ ಅಪಘಾತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಗುತ್ತಿದೆ. ಜ.26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ 588 ಮಂದಿ ಚಾಲಕರಿಗೂ ಪದಕ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಮೊದಲು ಅಪಘಾತ ಮತ್ತು ಅಪರಾಧರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಮಾತ್ರ ಬೆಳ್ಳಿ ಪದಕ ನೀಡಲಾಗುತ್ತಿತ್ತು. 2016ನೆ ಸಾಲಿನಿಂದ ಚಾಲಕ-ಕಂ-ನಿರ್ವಾಹಕ ಹುದ್ದೆಯವರಿಗೂ ಬೆಳ್ಳಿ ಪದಕ ನೀಡುವ ಯೋಜನೆಯನ್ನು ವಿಸ್ತರಿಸಲಾಗಿದೆ.

‘ಸುರಕ್ಷಾ ಚಾಲಕ’ ಬಿರುದು ನೀಡಿ, ಸಂಸ್ಥೆ ಲಾಂಛನವಾದ ‘ಗಂಡಬೇರುಡ’ ಲೋಗೋವುಳ್ಳ 32 ಗ್ರಾಂ ಬೆಳ್ಳಿ ಪದಕ, 2 ಸಾವಿರ ರೂ.ನಗದು, ಪ್ರಶಂಸನಾ ಪತ್ರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಚಾಲಕರು ಅಪಘಾತವೆಸಗದಂತೆ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹಿಸುವ ದೃಷ್ಟಿಯಿಂದ ಮಾಸಿಕ 50 ರೂ.ಪ್ರೋತ್ಸಾಹ ಭತ್ಯೆ ನೀಡಲಾಗುತ್ತಿದೆ.

ರಾಮನಗರ-35, ತುಮಕೂರು-32, ಕೋಲಾರ-58, ಚಿಕ್ಕಬಳ್ಳಾಪುರ-40, ಮೈಸೂರು ನಗರ-16, ಮೈಸೂರು ಗ್ರಾ.-138, ಮಂಡ್ಯ-23, ಚಾಮರಾಜನಗರ-27, ಹಾಸನ-129, ಚಿಕ್ಕಮಗಳೂರು-16, ಮಂಗಳೂರು-1, ಪುತ್ತೂರು- 13, ದಾವಣಗೆರೆ (ಶಿವಮೊಗ್ಗ ಸೇರಿ)-52 ಸೇರಿ ಒಟ್ಟು 588 ಮಂದಿಗೆ ಪದಕ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News