×
Ad

ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ನಾವು ಯಾರ ಮಕ್ಕಳು : ಸಿದ್ದರಾಮಯ್ಯ

Update: 2018-01-21 20:43 IST

ಬಾಗೇಪಲ್ಲಿ,ಜ.21: ಒಬ್ಬರು ಮಣ್ಣಿನ ಮಗ, ಮತ್ತೊಬ್ಬರು ರೈತನ ಮಗ ಎಂದು ಹೇಳಿಕೊಳ್ಳುತ್ತಾರೆ ಹಲವಾರು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿರುವ ನಾವು ಯಾರ ಮಕ್ಕಳು ಎಂದು ಪರೋಕ್ಷವಾಗಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ  ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ತಾಲೂಕಿನ ದೇವರಗುಡಿಪಲ್ಲಿ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರವಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ  ಉಚಿತ ಸಾಮೂಹಿಕ ವಿವಾಹಗಳ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ರೈತರಿಗೆ ಅನುಕೂಲವಾಗುವಂತಹ ಯಾವುದೇ ಯೋಜನೆ ಅನುಷ್ಠಾನಗೊಳಲು ಸಾಧ್ಯವಾಗಿಲ್ಲ, ಆಗ ಇಲ್ಲದ ಪ್ರೀತಿ ಈಗ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಏಕಾಏಕಿ ರೈತರ ಮೇಲೆ ಪ್ರೀತಿ ಹುಕ್ಕಿ ಬರುತ್ತಿದೆ. ನಾನು ರೈತನ ಮಗ, ನಾನು ಮಣ್ಣಿನ ಮಗ ಎಂದು ಹೇಳಿಕೊಂಡು ಮತದಾರರನ್ನು ಸೆಳೆಯಲು ಹರಸಾಹಸ ಪಡುತ್ತಿದ್ದಾರೆ. ಅನ್ನಭಾಗ್ಯ, ಕ್ಷೀರ ಭಾಗ್ಯ, ಶೂ ಭಾಗ್ಯ, ಶಾಧಿ ಭಾಗ್ಯ,ಕೃಷಿ ಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ನಾವು ಯಾರ ಮಕ್ಕಳು ಎಂದ ಅವರು ನಾವೇ ನಿಜವಾದ ರೈತರ ಹಾಗೂ ಮಣ್ಣಿನ ಮಕ್ಕಳು ಎಂದು ಬಿಜೆಪಿ ಮತ್ತು ಜೆಡಿಸ್ ಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.

ಈ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಎತ್ತಿನಹೊಳೆಯ ಯೋಜನೆಯನ್ನು ಜಾರಿಗೆ ತಂದು ಸುಮಾರು 13ಸಾವಿರ ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆಗೊಳಸಲಾಗಿದೆ. ಅಂರ್ತಜಲದ ಮಟ್ಟ ಹೆಚ್ಚಿಸಲು ನಾಗವಾರ ಮತ್ತು ಹೆಬ್ಬಾಳ ಕೆರೆಗಳ ನೀರನ್ನು ಶುದ್ದೀಕರಿಸಿ ಈ ಭಾಗದ ಪ್ರತಿಯೊಂದು ಕೆರೆಗಳಿಗೆ ತುಂಬಿಸಲಾಗುವುದು ಎಂದರು.

ಕುವೆಂಪುರವರು ಹೇಳಿರುವಂತೆ ಯಾವುದೇ ಒಂದು ಮಗು ಹುಟ್ಟುವಾಗ ವಿಶ್ಚ ಮಾನವಾನಾಗಿ ಹುಟ್ಟುತ್ತಾನೆ ಆದರೆ ಬೆಳೆದಂತೆ ಯಾವುದೇ ಕಾರಣಕ್ಕೂ ಅಲ್ಪಮಾನವನಾಗದೆ ಮಾನವನಾಗಬೇಕೆಂದು ಸಲಹೆ ನೀಡಿದ ಅವರು ಇಂದು ಅದ್ದೂರಿ ಮದುವೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಸರಳ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಮಾನವೀಯ ಮೌಲ್ಯಗಳನ್ನು ಕಾಪಾಡಬೇಕಾಗಿದೆ. ಈಗ ಮದುವೆ ಆಗಿರುವ ನವಜೋಡಿಗಳು ಸಮಾಜಕ್ಕೆ ಆದರ್ಶವಾಗಿ ಬಾಳಿ ನಿಮ್ಮ ಜೀವನಕ್ಕೆ ಒಂದು ಇಲ್ಲವೆ ಎರಡು ಮಕ್ಕಳು ಸಾಕು ಎಂದು ಹಾರೈಸಿದರು.

ಮಾಜಿ ಕೇಂದ್ರ ಸಚಿವರು ಹಾಗೂ ಹಾಲಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಎಂ.ವೀರಪ್ಪಮೊಯ್ಲಿರವರು ಮಾತನಾಡಿ ಎತ್ತಿನ ಹೊಳೆ ಯೋಜನೆಯಿಂದ ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳ ಕೆರೆಗಳಿಗೆ ಇನ್ನು ಕೇವಲ 1-2 ವರ್ಷಗಳಲ್ಲಿ ಈ ಭಾಗದ ಕೆರೆಗಳಿಗೆ ತುಂಬಲಿವೆ ಅದೇ ರೀತಿಯಲ್ಲಿ ನಾಗವಾರ ಮತ್ತು ಹೆಬ್ಬಾಳದ ಕೆರೆಗಳ ನೀರನ್ನು ಶುದ್ದೀಕರಿಸಿ ಕೆರೆಗಳಿಗೆ ತುಂಬಿಸುವಂತಹ ಮಹತ್ವದ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಕೆ.ಹೆಚ್.ಮುನಿಯಪ್ಪ, ಸಚಿವರಾದ ಡಿ.ಕೆ.ಶಿವಕುಮಾರ್, ಹೆಚ್.ಸಿ.ಮಹದೇವಪ್ಪ, ಶಾಸಕ ಡಾ.ಕೆ.ಸುಧಾಕರ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಧ್ಯಮ ಸಂಯಮ ಮಂಡಲಿ ನಿದೇರ್ಶಕ ಟಿ.ರವಿಚಂದ್ರಾರೆಡ್ಡಿ, ಜಿ.ಪಂ ಸದಸ್ಯ ನರಸಿಂಹಪ್ಪ, ತಾ.ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್.ನರೇಂದ್ರ ಸೇರಿದಂತೆ ಅನೇಕು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News